ಗದಗ/ಧಾರವಾಡ/ಬಳ್ಳಾರಿ/ಕೊಪ್ಪಳ: ಮಹಾಶಿವರಾತ್ರಿ ಹಿನ್ನೆಲೆ ರಾಜ್ಯಾದ್ಯಂತ ಇಂದು ಬೆಳಗ್ಗೆಯಿಂದಲೇ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ಜರುಗುತ್ತಿದ್ದು ಭಕ್ತರು ದೇವಸ್ಥಾನಗಳಿಗೆ ತೆರಳಿ ಶಿವನಾಮ ಜಪಿಸುತ್ತಿದ್ದಾರೆ.
ಗದಗನ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಶಿವನಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಎಳೆನೀರಾಬಿಷೇಕ ಜರುಗುತ್ತಿವೆ. ಇನ್ನು ಮಹಾಶಿವರಾತ್ರಿ ಹಿನ್ನೆಲೆ ಸಾವಿರಾರು ಭಕ್ತರು ಉಪವಾಸ ವ್ರತ ಕೈಗೊಂಡಿದ್ದು, ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಮಹಾಶಿವರಾತ್ರಿ ನಿಮಿತ್ತ ಧಾರವಾಡ ನಗರದ ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸೋಮೇಶ್ವರಿಗೆ ಹಾಲಿನಿಂದ ಅಭಿಷೇಕ ಮಾಡಿ ವಿಶೇಷ ಪೂಜೆ ಮಾಡಲಾಯಿತು.
ಬಳ್ಳಾರಿಯ ಕನಕದುರ್ಗಮ್ಮ ದೇಗುಲದ ಆವರಣದಲ್ಲಿಂದು ಶಿವರಾತ್ರಿ ಪ್ರಯುಕ್ತ ಬಿಲ್ವಪತ್ರೆ ಹಾಗೂ ಪಂಚಾಮೃತ ವಿತರಣೆ ಮಾಡಲಾಯಿತು. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಆರಾಧ್ಯ ರಂಗ ಬಳಗ, ಪಂಡಿತ್ ಪುಟ್ಟರಾಜ ಕವಿಗವಾಯಿಗಳ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಚಾಲನೆ ನೀಡಿದರು. ಈ ವೇಳೆ, ನೂರಾರು ಶಿವಭಕ್ತರು ಸಾಲುಸಾಲಾಗಿ ಬಂದು ಬಿಲ್ವಪತ್ರೆ ಹಾಗೂ ಪಂಚಾಮೃತ ಪ್ರಸಾದವನ್ನ ಸ್ವೀಕರಿಸಿ ಉಪವಾಸ ವ್ರತಾಚರಣೆ ಆರಂಭಿಸಿದರು.
ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಇರುವ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತಿವೆ. ನಗರದ ಕಾವ್ಯಾನಂದ ಉದ್ಯಾನವನದಲ್ಲಿರುವ ಈಶ್ವರ ದೇವಸ್ಥಾನ, ಗೌರಿಶಂಕರ ದೇವಸ್ಥಾನ, ಪ್ಯಾಟಿ ಈಶ್ವರ ದೇವಸ್ಥಾನ, ಮಳೆ ಮಲ್ಲೇಶ್ವರ ದೇವಸ್ಥಾನ, ಭಾಗ್ಯನಗರದ ನೀಲಕಂಠೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯ ವಿವಿಧ ಶಿವಾಲಯಗಳಲ್ಲಿ ಬೆಳಗ್ಗೆಯಿಂದಲೇ ಶಿವಲಿಂಗುಗಳಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಪುರಸ್ಕಾರ ನಡೆಯುತ್ತಿವೆ.