ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ನೀರಿನ ವಿಚಾರವಾಗಿ ಗೋವಾ ಮುಖ್ಯಮಂತ್ರಿಯ ಧೋರಣೆ ಖಂಡಿಸಿ ಮಹದಾಯಿ-ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ತಮ್ಮ ಆಕ್ರೋಶ ಹೊರಹಾಕಿದರು. ಈ ವೇಳೆ, ಕಳಸಾ ಬಂಡೂರಿ ಹೋರಾಟಗಾರ ಅಮೃತ ಇಜಾರೆ ಮಾತನಾಡಿ, ಮಹದಾಯಿ ಕಳಸಾ ಬಂಡೂರಿ ವಿಚಾರವಾಗಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ತೀರ್ಮಾನಿಸಿದಾಗ ಸೌಹಾರ್ದಯುತ ಮಾತುಕತೆಗೆ ಒಪ್ಪಿದ ಗೋವಾ ಸಿಎಂ ನಡೆ ಖಂಡನೀಯ. ಕೂಡಲೇ ಒಕ್ಕೂಟ ವ್ಯವಸ್ಥೆಯ ವಿರುದ್ಧ ನಡೆದುಕೊಳ್ಳುವ ಮುಖ್ಯಮಂತ್ರಿಗಳ ವಿರುದ್ಧ ದೇಶದ ಪ್ರಧಾನಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಒಕ್ಕೂಟ ವ್ಯವಸ್ಥೆ ಉಳಿಯಲು ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಮಹದಾಯಿ ನದಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.
ರಾಜ್ಯ ಸರ್ಕಾರ ಕಳಸಾ - ಬಂಡೂರಿ ನಾಲಾ ಯೋಜನೆಗೆ ಬಜೆಟ್ನಲ್ಲಿ ಹಣವನ್ನಿಟ್ಟು ಕಳಸಾ ಬಂಡೂರಿ ನಾಲಾವನ್ನು ಅಭಿವೃದ್ಧಪಡಿಸಿ ರೈತರಿಗೆ ಸಹಾಯ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹದಾಯಿ ಕಳಸಾ ಬಂಡೂರಿ ವಿಚಾರವಾಗಿ ಮಲತಾಯಿ ಧೋರಣೆಯನ್ನು ಮತ್ತೆ ಮುಂದುವರೆಸಿದರೆ ಮತ್ತೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಅಲ್ಲದೇ, ಕೂಡಲೇ ಪ್ರಧಾನಿ ಮಹದಾಯಿ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ನೂರಾರು ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿಯ ಸದಸ್ಯರು ಭಾಗವಹಿಸಿದ್ದರು.