ಧಾರವಾಡ : ಮದುವೆಗೆ ಜಾತಿಯ ಕಾರಣಕ್ಕೆ ಪೋಷಕರು ಅಡ್ಡಿಯಾಗಿದ್ದರಿಂದಾಗಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.
ತಡಹಾಳ ಗ್ರಾಮದ ಸಾವಿತ್ರಿ ಎಂಬ ಯುವತಿ ಮತ್ತು ಬಸವರಾಜ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡವರು. ಇವರಿಬ್ಬರ ಜಾತಿ ಬೇರೆಯಾದ್ರೂ ಪ್ರೀತಿ ಮುಂದೆ ಅದೆಲ್ಲವೂ ಗೌನವಾಗಿತ್ತು. ಇನ್ನೇನು ಮದುವೆ ಆಗುವ ಸನಿಹದಲ್ಲಿದ್ದರು. ಆದರೆ, ಬಸವರಾಜ್ ಅನ್ಯಜಾತಿಯ ಹುಡುಗ ಎಂದು ಸಾವಿತ್ರಿ ಮನೆಯವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಸಾವಿತ್ರಿಯನ್ನ ಬೇರೆಯವರೊಟ್ಟಿಗೆ ಮದುವೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು.
ಇದರಿಂದ ಮನನೊಂದು ಇಬ್ಬರು ವಿಷ ಸೇವಿಸಿದ್ದಾರೆ. ವಿಷ ಸೇವಿಸಿ ಕೆಲವೇ ಕ್ಷಣಗಳಲ್ಲಿ ಇಬ್ಬರು ಪ್ರಜ್ಞೆ ತಪ್ಪಿದ್ದಾರೆ. ಮೊದಲು ಇಬ್ಬರನ್ನು ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ತರುವ ಮಾರ್ಗ ಮಧ್ಯದಲ್ಲಿಯೇ ಸಾವಿತ್ರಿ ಕೊನೆಯುಸಿರು ಎಳೆದಿದ್ದಾಳೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಬಸವರಾಜ್ ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಬೆಳಗಾದರೆ ಮದುವೆ ನಡೆಯಬೇಕಿತ್ತು. ಆದರೆ, ಈಗ ಇಡೀ ಊರೇ ಸೂತಕದಲ್ಲಿ ಮುಳುಗಿದೆ. ಪಿಎಸ್‌ಐ ಆಗಬೇಕೆಂದು ಕನಸು ಕಂಡಿದ್ದ. ಬಡ ಕುಟುಂಬದಲ್ಲಿ ಹುಟ್ಟಿ ಏನಾದರು ಸಾಧನೆ ಮಾಡಲು ಪರೀಕ್ಷೆ ಸಹ ಬರೆದು ಭವಿಷ್ಯದ ಬಗ್ಗೆ ಎದುರು ನೋಡುತ್ತಿದ್ದ. ಆದರೆ, ಯುವಕ ಮತ್ತು ಯುವತಿಯ ಆತ್ಯಹತ್ಯೆ ನಿರ್ಧಾರದಿಂದಾಗಿ ಎರಡೂ ಕುಟುಂಬಗಳು ಶೋಕದಲ್ಲಿ ಮುಳುಗುವಂತಾಗಿದೆ.