ಹುಬ್ಬಳ್ಳಿ: ಪ್ರೀತಿಗೆ ಮನೆಯವರು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಪ್ರಿಯಕರ ತನ್ನ ಅಪ್ರಾಪ್ತೆಗೆ ವಿಷ ಕುಡಿಸಿ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಫೆ.14 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹುಲಗೆಪ್ಪ ಸುಳ್ಳದ ಎಂಬುವವನೇ ತಾನು ಪ್ರೀತಿಸಿದ ಅಪ್ರಾಪ್ತ ಬಾಲಕಿಗೆ ಹೊಲದಲ್ಲಿ ವಿಷ ಕುಡಿಸಿ ತಾನೂ ಕುಡಿದಿದ್ದಾನೆ. ಬಳಿಕ ಬೈಕ್ನಲ್ಲಿ ಕಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಘಟನೆ ಹಿನ್ನೆಲೆ:
ಹುಲಗೆಪ್ಪ ಎಂಬುವ ಯುವಕ ಸುಮಾರು ದಿನಗಳಿಂದ ಅನ್ಯ ಕೋಮಿನ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಹುಡುಗಿಯ ಮನೆಯಲ್ಲಿ ತಿಳಿದಿದ್ದೇ, ಆಕೆಯ ಮನೆಯಲ್ಲಿ ಬೇರೆ ಯುವಕನೊಂದಿಗೆ ಮದುವೆ ಮಾಡಲು ಮುಂದಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಇಬ್ಬರೂ ವಿಷ ಕುಡಿದಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಪ್ರೇಯಸಿ ಮೃತಪಟ್ಟಿದ್ದು, ಪ್ರಿಯಕರನ ಸ್ಥಿತಿ ಗಂಭೀರವಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಕಿಮ್ಸ್ ಆಸ್ಪತ್ರೆಗೆ ಆಗಮಿಸಿದ ಬಾಲಕಿಯ ಪಾಲಕರು ಯುವಕನ ಮೇಲೆ ದೂರು ನೀಡಿದ್ದಾರೆ. ಈ ಕುರಿತು ಧಾರವಾಡದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.