ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಧರ್ಮ ಸಂಕಟ ಎದುರಾಗಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳು ಹಕ್ಕೊತ್ತಾಯ ಮಂಡಿಸಿವೆ.
ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿಂದು ಬೃಹತ್ ಸಭೆ ನಡೆಸಿದ ಮಠಾಧೀಶರು, ಎಲ್ಲ ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು. ಮಠಾಧೀಶರ ಸಭೆಯ ನೇತೃತ್ವವನ್ನು ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಹಿಸಿದ್ದರು. ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಸ್ವಾಮೀಜಿ, ಉಜ್ಜೈನಿ ಪೀಠಗಳ ಜಗದ್ಗುರು, ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ, ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ಸಿದ್ಧರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಇದ್ದರು.
ಈಗಾಗಲೇ ವೀರಶೈವ ಲಿಂಗಾಯತದ 28 ಉಪಪಂಗಡಗಳಾದ ಗಾಣಿಗ, ಲಿಂಗಾಯತ ಕುರುಬ, ಹಡಪದ, ಮೇದಾರ, ನೇಕಾರ ಸೇರಿ 28 ಉಪಪಂಗಡಗಳು ಒಬಿಸಿ ಪಟ್ಟಿಯಲ್ಲಿವೆ. ಇನ್ನುಳಿದ 59 ಉಪಪಂಗಡಗಳನ್ನೂ ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಮಠಾಧೀಶರು ಒತ್ತಾಯಿಸಿದರು. ಪಂಚಮಸಾಲಿ, ಸಾದರ, ಬಣಜಿಗ, ಜಂಗಮ, ಉಪ್ಪಾರ, ಕುಂಬಾರ, ಶೀಲವಂತ ಸೇರಿ 59 ಉಪಪಂಗಡಗಳನ್ನು ಒಬಿಸಿಗೆ ಸೇರಿಸಲು ಮನವಿ ಮಾಡಿದ್ದಾರೆ.
ವೀರಶೈವ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಇಡೀ ಕರ್ನಾಟಕದ ಮಠಾಧೀಶರು ಒಗ್ಗೂಡಲು ಮೂವರು ಮಾಸ್ಟರ್ ಮೈಂಡ್ ಇದ್ದಾರೆ ಎಂದು ಮೂರು ಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಈ ಎಲ್ಲ ಹೋರಾಟದ ಮಾಸ್ಟರ್ ಮೈಂಡ್ ಶ್ರೀಶೈಲ ಪೀಠದ ಚನ್ನಸಿದ್ಧರಾಮ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ಮಾಮೀಜಿ, ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ ಎಂದು ಹೇಳಿದರು.
ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವುದು ಅನಿವಾರ್ಯ. ನಿಮ್ಮ ರೊಟ್ಟಿ ಕೊಟ್ಟ ಋಣವನ್ನು ತೀರಿಸುವ ಸಮಯ ಬಂದಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಬಂದಿದ್ದೇವೆ ಎಂದ ಸ್ವಾಮೀಜಿಗಳು ಹೇಳಿದರು.
ಲಿಂಗಾಯತ ಸಮಾಜವನ್ನು ಕೇಂದ್ರ ಒಬಿಸಿ ಸೇರಿಸಿದರೆ ಸಮಾಜದ ಮಕ್ಕಳಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರ ತಾಯಿ ಸ್ಥಾನದಲ್ಲಿ ನಿಂತುಕೊಂಡು ಬೇಡಿಕೆ ಈಡೇರಿಸಬೇಕು. ಇದು ನಿಮ್ಮ ಹಕ್ಕು, ಭಿಕ್ಷೆ ಅಲ್ಲ. ಭಕ್ತರ ಮನಿಗೆ ಹೋಗಿ ಭಿಕ್ಷೆ ಬೇಡುತ್ತೇವೆಯೇ ಹೊರತು ಕೇಂದ್ರಕ್ಕೆ ಅಲ್ಲ ಎಂದು ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಎಂಪಿಗಳು ಸೇರಿಕೊಂಡು ಮಠ ಮತ್ತು ಸಮಾಜವನ್ನು ನಾಶಮಾಡುವ ಕೆಟ್ಟ ಜನರು ಹುಟ್ಟಿಕೊಂಡಿದ್ದಾರೆ. ಸಂಸದರು ನಮ್ಮ ಉದ್ದೇಶವನ್ನು ಬಹುಬೇಗ ಮುಟ್ಟಿಸಬೇಕು. ಇಲ್ಲವಾದಲ್ಲಿ ನಾವೇ ಅಲ್ಲಿಗೆ ಬಂದು ಬೇಡಿಕೆಗೆ ಒತ್ತಾಯಿಸುತ್ತೇವೆ. ಹಳೇ ಸಮಸ್ಯೆ ಮರೆತು ಹೊಸ ಕ್ರಾಂತಿಗೆ ಮುಂದಾಗಬೇಕು. ಸಮಾಜದ ಮಕ್ಕಳು ಸತತ ಪ್ರಯತ್ನ ಮಾಡಿದರು ಉದ್ಯೋಗ ಸಿಗುತ್ತಿಲ್ಲ. ಸಮಾಜ ಒಂದಾಗುವ ಕಾಲ ಬಂದಿದೆ. ಸಮಾಜದ ಪ್ರತಿನಿಧಿಗಳು ಕೂಡಲೇ ನಮ್ಮ ಬೇಡಿಕೆಗಳನ್ಜು ಈಡೇರಿಸಬೇಕೆಂದು ಒತ್ತಾಯಿಸಿದರು.
ಮಠಾಧೀಶರು ಸಮಾಜದ ಋಣತೀರಿಸುವ ಸಮಯ ಬಂದಿದೆ- ಶ್ರೀಶೈಲ ಜಗದ್ಗುರು: ವೀರಶೈವ ಲಿಂಗಾಯತ ಒಳಪಂಗಡಗಳ ಸಭೆಯಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಹಕ್ಕೊತ್ತಾಯ ಸಮಾಜದ ಭಕ್ತರ ಮಕ್ಕಳಿಗೆ ಉಪಯೋಗವಾಗುವಂಥದ್ದು. ಎಲ್ಲ ಮಠಾಧೀಶರ ಮೇಲೆ ಸಮಾಜದ ಋಣ ಇದೆ. ಋಣ ತೀರಿಸಲು ಎಲ್ಲ ಮಠಾಧೀಶರು ಈ ಹಕ್ಕೊತ್ತಾಯ ಮಾಡುತ್ತಿದ್ದಾರೆ. 78 ಉಪಪಂಗಡಗಳಲ್ಲಿ 26 ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲಾಗಿದೆ. ಇನ್ನೂ 60ಕ್ಕೂ ಅಧಿಕ ಉಪಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕಿದೆ ಎಂದು ಹೇಳಿದರು.
60ಕ್ಕೂ ಅಧಿಕ ಒಳಪಂಗಡಗಳು ಕೇಂದ್ರದ ಒಬಿಸಿಯಿಂದ ವಂಚಿತವಾಗಿವೆ. ರಾಜ್ಯದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳನ್ನು ಸೇರಿಸಲಾಗಿದೆ. ಆದ್ರೆ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇನ್ನುಳಿದ ಒಳಪಂಗಡಗಳನ್ನು ಸೇರಿಸಿಲ್ಲ. ಕೇಂದ್ರ ಸರ್ಕಾರ ಈ ಒಳಪಂಗಡಗಳನ್ನೂ ಒಬಿಸಿಗೆ ಸೇರಿಸಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಮುಂದಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.