ಕಲಘಟಗಿ (ಧಾರವಾಡ): ಕೋವಿಡ್-19 ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಆರು ದಿನಗಳಿಂದ ರಾಜಿರಹಿತ ಹೋರಾಟಕ್ಕೆ ಇಳಿದಿದ್ದು, ಬುಧವಾರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಪತ್ರ ಚಳುವಳಿ ಮಾಡಿದರು.
ಬೆಳಗ್ಗೆ ಪಟ್ಟಣದ ಅಂಚೆ ಕಚೇರಿಗೆ ತೆರಳಿ ಪತ್ರ ಬರೆದ ಆಶಾ ಕಾರ್ಯಕರ್ತೆಯರು ಬೇಡಿಕೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿದರು. ಸೇವಾ ನಿರತ ಆಶಾ ಕಾರ್ಯಕರ್ತೆಯರ ಪ್ರತಿ ತಿಂಗಳ ಗೌರವ ಧನವನ್ನು ರೂ. 12 ಸಾವಿರಕ್ಕೆ ಹೆಚ್ಚಳ ಮಾಡಬೇಕು ಹಾಗೂ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸಂರಕ್ಷಣಾ ಸಾಮಗ್ರಿ ವಿತರಿಸಬೇಕು ಎಂದು ಆಗ್ರಹಿಸಿದರು.
ಪತ್ರ ಚಳುವಳಿಯಲ್ಲಿ ಮೋನಿಕಾ ಅಂಗಡಿ, ಅಕ್ಕಮಹಾದೇವಿ ಬಡಿಗೇರ, ಮಂಜುಳಾ ಮೊರಬ, ಪ್ರೇಮಾ ಲಮಾಣಿ, ಗೀತಾ ಕಮ್ಮಾರ, ಶಶಿಕಲಾ ಪೂಜಾರ, ಗಂಗಾ ರಾಠೋಡ, ಶ್ರೀದೇವಿ ಪಾಟೀಲ, ಜ್ಯೋತಿ ಸಂತಬಾನವರ ಭಾಗವಹಿಸಿದ್ದರು.