ಹುಬ್ಬಳ್ಳಿ: ಮೂರು ಸಾವಿರ ಮಠದ ಆಸ್ತಿ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ವಾಮೀಜಿಗಳ ನಡುವೆ ಇದು ತಿಕ್ಕಾಟಕ್ಕೆ ಕಾರಣವಾಗಿದ್ರೆ, ಇತ್ತ ಕೆಎಲ್ಇ ಸಂಸ್ಥೆ ವಿರುದ್ದ ಭಕ್ತರ ಬಳಿಕ ಈಗ ವೀರಶೈವ ಲಿಂಗಾಯತ ಒಳಪಂಗಡಗಳು ಸಿಡಿದೆದ್ದಿದ್ದು, ಕೆಎಲ್ಇ ಸೊಸೈಟಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹುಬ್ಬಳ್ಳಿಯ ಗಬ್ಬೂರು ಬಳಿ ಕೆಎಲ್ಇ ಸೊಸೈಟಿಗೆ ಮೆಡಿಕಲ್ ಕಾಲೇಜು ಕಟ್ಟಲು ಮೂರು ಸಾವಿರ ಮಠದ ಭೂಮಿಯನ್ನು ದಾನವಾಗಿ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಆರ್ಥಿಕವಾಗಿ ಸದೃಢವಾಗಿರುವ ಕೆಎಲ್ಇ ಸಂಸ್ಥೆಗೆ ಉಚಿತವಾಗಿ 500 ಕೋಟಿ ಬೆಲೆ ಬಾಳುವ ಆಸ್ತಿ ದಾನವಾಗಿ ನೀಡಿರುವುದಕ್ಕೆ ದಿಂಗಾಲೇಶ್ವರ ಶ್ರೀ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಭಕ್ತರು ಕಾನೂನು ಸಮರ ನಡೆಸುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಈಗ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಕೆಎಲ್ಇ ವಿರುದ್ದ ಸಮರ ಸಾರುವ ಎಚ್ಚರಿಕೆ ನೀಡಿದೆ. ಕೆಎಲ್ಇ ಸೊಸೈಟಿಯವರಿಗೆ ಪತ್ರ ಬರೆದಿರುವ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮೆಡಿಕಲ್ ಕಾಲೇಜು ಆರಂಭ ಮಾಡಿದ್ರೆ ತಮ್ಮ 6 ಬೇಡಿಕೆಗಳನ್ನು ಒಪ್ಪಿಕೊಂಡು ಷರತ್ತುಬದ್ದ ನಿರ್ಣಯಕ್ಕೆ ಬದ್ದವಾಗಿರಬೇಕು, ಇಲ್ಲದಿದ್ದರೆ ಕೆಎಲ್ಇ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಓದಿ: ಕೊರೊನಾ ಅವಧಿ: ಶೇ. 15ರಷ್ಟು ಏರಿದ ಬಾಲ್ಯ ವಿವಾಹ ಪ್ರಕರಣ
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇವರ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗಲು, ಮೆಡಿಕಲ್ ಕಾಲೇಜಿಗೆ ಕನಿಷ್ಠ 150 ಸೀಟುಗಳು ಲಭಿಸಲಿದ್ದು ಅದರಲ್ಲಿ 25% ಸೀಟುಗಳನ್ನ ಮಠಕ್ಕೆ ಉಚಿತವಾಗಿ ನೀಡಬೇಕು. ಕಾಲೇಜಿನಲ್ಲಿ ಉದ್ಯೋಗ ನೀಡುವಾಗ ಧಾರವಾಡ ಜಿಲ್ಲೆಯವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ಉದ್ಯೋಗ ನೀಡಬೇಕು. ಮೆಡಿಕಲ್ ಸೀಟು ಹಂಚುವಾಗ ಲಿಂಗಾಯತ ಸಮಾಜಕ್ಕೆ 25% ಸೀಟುಗಳನ್ನ ರಿಯಾಯಿತಿ ನೀಡಬೇಕು ಎಂದಿದ್ದಾರೆ.
ವೀರಶೈವ ಲಿಂಗಾಯತ ಒಳ ಪಂಗಡಗಳ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುವುದು ಹಾಗೂ ಸಮಾಜದ ಇತರರಿಗೆ ರಿಯಾಯಿತಿ ಒದಗಿಸಬೇಕು. ಒಡಂಬಡಿಕೆ ಪತ್ರದಂತೆ ಜಿಲ್ಲೆಯ ಎಲ್ಲಾ ಒಳಪಂಗಡಗಳ ಹಿರಿಯರ ಸಮಿತಿ ರಚಿಸಬೇಕು. ಹಿರಿಯ ಜನಪ್ರತಿನಿಧಿಗಳ ಕೋರ್ ಕಮಿಟಿ ರಚಿಸಿ, ಅದರಲ್ಲಿ ಎರಡನೇ ಹಂತದ ಯುವ ನಾಯಕರನ್ನ ಸೇರಿಸಬೇಕೆಂದು ಆರು ಷರತ್ತುಗಳನ್ನು ಹಾಕಿದ್ದಾರೆ. ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಬರೆದಿರುವ ಪತ್ರ ಈಗ ಕೆಎಲ್ಇ ಸೊಸೈಟಿ ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.