ಧಾರವಾಡ: ನಾಳೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಮತಗಟ್ಟೆಗಳ ಸಿಬ್ಬಂದಿ ಮಸ್ಟರಿಂಗ್ ನಡೆಸಿದರು. ಇದನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಪರಿಶೀಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ 144, ಗದಗ 130 ಹಾಗೂ ಹಾವೇರಿ 230 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟು 7,501 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಧಾರವಾಡ ಮತ್ತು ಹಾವೇರಿಯಲ್ಲಿ ತಲಾ ಒಬ್ಬರು ಲೋಕಸಭಾ ಸದಸ್ಯರು, ಧಾರವಾಡ ಜಿಲ್ಲೆಯಲ್ಲಿ ಏಳು ಶಾಸಕರು, ಹಾವೇರಿಯಲ್ಲಿ ಆರು ಹಾಗೂ ಗದಗ ಜಿಲ್ಲೆಯಲ್ಲಿ 4 ಶಾಸಕರು ಮತದಾನ ಮಾಡುತ್ತಾರೆ. ಇದರ ಜೊತೆಗೆ ನಾಮ ನಿರ್ದೇಶಿತ ಸದಸ್ಯರು ಹಾಗೂ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರು ಸಹ ಮತದಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿಯಲ್ಲಿ ಮಸ್ಟರಿಂಗ್ ನಡೆಸಿದ ಜಿಲ್ಲಾಡಳಿತ:
ನಾಳೆ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಪರಿಷತ್ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತ ಪೆಟ್ಟಿಗೆಗಳನ್ನು ಪಡೆದುಕೊಂಡ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗೆ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು. ಪ್ರತಿ ಬೂತ್‌ಗೆ ಒಬ್ಬ ಮೈಕೋ ವೀಕ್ಷಕರ ನೇಮಕ ಮಾಡಲಾಗಿದೆ.
ಗದಗ, ಹಾವೇರಿ ಮತ್ತು ಧಾರವಾಡ ಸೇರಿ ಒಟ್ಟು 504 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 2,165 ( 1054 ಪುರುಷ , 1111 ಮಹಿಳೆಯರು ) , ಗದಗ ಜಿಲ್ಲೆಯಲ್ಲಿ 1,969 ( 969 ಪುರುಷ , 1000 ಮಹಿಳೆಯರು) ಹಾಗೂ ಹಾವೇರಿ ಜಿಲ್ಲೆಯಲ್ಲಿ 3,360 ( 1636 ಪುರುಷ 1733 ಮಹಿಳೆಯರು) ಒಟ್ಟು 7,501 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಶಿವಮೊಗ್ಗದಲ್ಲಿ ಪರಿಷತ್ ಚುನಾವಣೆಗೆ ಸಕಲ ಸಿದ್ಧತೆ :
ಒಂದು ಸ್ಥಾನಕ್ಕಾಗಿ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳು ಸೇರ್ಪಡೆಯಾಗಿವೆ.
ಮಹಿಳಾ ಮತದಾರರೆ ಹೆಚ್ಚು:
ಜಿಲ್ಲೆಯಲ್ಲಿ ಒಟ್ಟು 4,164 ಅರ್ಹ ಮತದಾರರಿದ್ದು, ಇವರಲ್ಲಿ 1,983 ಪುರುಷರು ಹಾಗೂ 2181 ಮಹಿಳೆಯರಿದ್ದಾರೆ. ಇವರಲ್ಲಿ 93 ಅನಕ್ಷರಸ್ಥ ಮತದಾರರಿದ್ದು, ಇವರಿಗೆ ತಮ್ಮ ಜೊತೆ ಓರ್ವರನ್ನು ಕರೆತಂದು ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ.
ಶಿಕಾರಿಪುರ ಪುರಸಭೆಯಲ್ಲಿ 30, ಸೊರಬ ಪಟ್ಟಣ ಪಂಚಾಯತ್ನಲ್ಲಿ 14 , ಹೊನ್ನಾಳಿ ಪುರಸಭೆ 22, ಚನ್ನಗಿರಿ ಪುರಸಭೆ 29, ಭದ್ರಾವತಿ ನಗರಸಭೆ 37, ಶಿವಮೊಗ್ಗ ಮಹಾನಗರ ಪಾಲಿಕೆ 45, ಸಾಗರ ನಗರಸಭೆ 37, ಹೊಸನಗರ ಪಟ್ಟಣ ಪಂಚಾಯತ್ 14, ತೀರ್ಥಹಳ್ಳಿ ಪಟ್ಟಣ ಪಂಚಾಯತ್ 16 ಜನ ಸದಸ್ಯರನ್ನು ಹೊಂದಿವೆ.
ವಿಧಾನ ಪರಿಷತ್ ಕ್ಷೇತ್ರದಲ್ಲಿ ಒಟ್ಟು 365 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸೊರಬದಲ್ಲಿ 304, ಶಿಕಾರಿಪುರ - 470, ಹೊನ್ನಾಳಿ -321, ನ್ಯಾಮತಿ- 190, ಚನ್ನಗಿರಿ -730, ಭದ್ರಾವತಿ - 431, ಶಿವಮೊಗ್ಗ - 456, ಸಾಗರ - 379, ಹೊಸನಗರ- 294, ತೀರ್ಥಹಳ್ಳಿಯಲ್ಲಿ -335 ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ.
ಮತದಾನ ಸುಗಮವಾಗಿ ನಡೆಯಲು ಮತಗಟ್ಟೆಯಲ್ಲಿ ತಲಾ ಮೂವರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಮೈಕ್ರೋ ಅಬ್ರವೈಸರ್ ಹಾಗೂ ಒರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒರ್ವ ಕ್ಯಾಮೆರಾಮೆನ್ ನೇಮಕ ಮಾಡಲಾಗಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪರಿಷತ್ ಚುನಾವಣೆಗೆ ತುಮಕೂರಲ್ಲಿ 338 ಮತಗಟ್ಟೆಗಳ ಸ್ಥಾಪನೆ:
ನಾಳೆ ನಡೆಯಲಿರುವ ಪರಿಷತ್ ಚುನಾವಣೆಗೆ ಜಿಲ್ಲಾದ್ಯಂತ 338 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2,623 ಪುರುಷರು ಹಾಗೂ 2,936 ಮಹಿಳೆಯರು ಸೇರಿದಂತೆ ಒಟ್ಟು 5,559 ಮತದಾರರು ಮತದಾನ ಮಾಡಲಿದ್ದಾರೆ. 194 ಸಾಮಾನ್ಯ, 95 ಸೂಕ್ಷ್ಮ ಹಾಗೂ 49 ಅತಿ ಸೂಕ್ಷ್ಮ ಮತಕೇಂದ್ರಗಳು ಎಂದು ಗುರುತಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿನ ಮತಗಟ್ಟೆಗಳ ವಿವರ:
- ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 29 ಮತಗಟ್ಟೆಗಳ ಸ್ಥಾಪನೆ
- ತಿಪಟೂರು ತಾಲೂಕು- 26 ಮತಗಟ್ಟೆಗಳು
- ತುರುವೇಕೆರೆ ತಾಲೂಕು- 28 ಮತಗಟ್ಟೆಗಳು
- ಕುಣಿಗಲ್ ತಾಲೂಕು- 37 ಮತಗಟ್ಟೆಗಳು
- ತುಮಕೂರು ತಾಲೂಕು- 42 ಮತಗಟ್ಟೆಗಳು
- ಕೊರಟಗೆರೆ ತಾಲೂಕು-25 ಮತಗಟ್ಟೆಗಳು
- ಗುಬ್ಬಿ ತಾಲೂಕು-34 ಮತಗಟ್ಟೆಗಳು
- ಶಿರಾ ತಾಲೂಕು- 42 ಮತಗಟ್ಟೆಗಳು
- ಪಾವಗಡ ತಾಲೂಕು- 35 ಮತಗಟ್ಟೆಗಳು
- ಮಧುಗಿರಿ ತಾಲೂಕು- 40 ಮತಗಟ್ಟೆಗಳು
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಗೆಲ್ಲಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ