ಹುಬ್ಬಳ್ಳಿ: ಲಾಕ್‌ಡೌನ್ ಆದೇಶದ ಮಧ್ಯಯೂ ರಾಷ್ಟ್ರೀಯ ಹೆದ್ದಾರಿಯ ಟೋಲ್ ಶುಲ್ಕ ಸಂಗ್ರಹಣೆ ಆರಂಭವಾಗಿದ್ದು, ಟೋಲ್ ಆರಂಭವಾಗುತ್ತಿದ್ದಂತೆ ಅಗತ್ಯ ಸೇವೆಗಳ ವಾಹನಗಳಿಗಿಂತ, ಸಾಮಾನ್ಯ ಸರಕು ಸಾಗಾಣಿಕೆ ವಾಹನಗಳು ಹಾಗೂ ಅನವಶ್ಯಕವಾಗಿ ಖಾಸಗಿ ವಾಹನಗಳು ಓಡಾಟವನ್ನು ಆರಂಭಿಸಿವೆ.
ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ರಲ್ಲಿರುವ ಟೋಲ್ ಗೇಟ್‌ಗಳನ್ನು ತೆರೆಯಲಾಗಿದ್ದು, ಹುಬ್ಬಳ್ಳಿಯ ಗಬ್ಬೂರು ಬಳಿಯ ಟೋಲ್ ನಾಕಾದಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸರಕು ಸಾಗಣೆ ವಾಹನಗಳಿಗೆ ಮಾತ್ರ ಟೋಲ್ ಸಂಗ್ರಹಿಸಲಾಗುತ್ತಿದ್ದು, ಕೊರೊನಾ ವಾರಿಯರ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸರ್ಕಾರಿ, ತುರ್ತು ಸೇವೆ, ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಖಾಸಗಿ ವಾಹನಗಳು ರಸ್ತೆಗಿಳಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆ ಉಂಟಾಯಿತು.
ಗಬ್ಬೂರು ಟೋಲ್‌ನಲ್ಲಿ ಫಾಸ್ಟ್‌ಟ್ಯಾಗ್ ಸೇವೆ ಇಲ್ಲದಿರುವ ಕಾರಣ ನಗದು ಹಣ ನೀಡಿ ಟೋಲ್ ಶುಲ್ಕ ಕಟ್ಟುತ್ತಿರುವುದರಿಂದ ವಾಹನಗಳು ಸರದಿಯಲ್ಲಿ ನಿಲ್ಲುವಂತಾಯಿತು.
ಟೋಲ್ ಆರಂಭಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು, ಇದ್ದಕ್ಕಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಇದರಿಂದ ಸಾರ್ವಜನಿಕರ ಓಡಾಟ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.