ಹುಬ್ಬಳ್ಳಿ: ನಗರದಲ್ಲಿ ಕಳೆದ ತಿಂಗಳು ಶ್ರಾವಣದಲ್ಲಿ ಮದ್ಯ ಮಾರಾಟ ಜೋರಾಗಿ ನಡೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಮದ್ಯದ ಪೆಟ್ಟಿಗೆಗಳ ಮಾರಾಟ ಕೊಂಚ ಕುಸಿದಿದ್ದು, ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ.
ಆಗಸ್ಟ್ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ 1,32,648 ಲಿಕ್ಕರ್ ಪೆಟ್ಟಿಗೆಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ 1,34,275 ಪೆಟ್ಟಿಗೆ ಲಿಕ್ಕರ್ ಮಾರಾಟವಾಗಿದ್ದು, ಈ ಬಾರಿ ಮಾರಾಟದಲ್ಲಿ ಕೊಂಚ ಕುಸಿತ ಕಂಡಿದೆ. ಕಳೆದ 2021ರ ಆಗಸ್ಟ್‌ನಲ್ಲಿ 54,387 ಬಿಯರ್ ಪೆಟ್ಟಿಗೆ ಮಾರಾಟವಾಗಿದ್ದವು. ಈ ವರ್ಷ ಆಗಸ್ಟ್‌ನಲ್ಲಿ 57,968 ಬಿಯರ್ ಪೆಟ್ಟಿಗೆ ಮಾರಾಟವಾಗಿದ್ದು ಕೊಂಚ ಏರಿಕೆ ಕಂಡಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ ಆಗಸ್ಟ್‌ನಲ್ಲಿ 63,511 ಐಎಂಎಲ್ ಮದ್ಯದ ಪೆಟ್ಟಿಗೆಗಳು ಮಾರಾಟವಾಗಿದ್ದರೆ, ಧಾರವಾಡ ತಾಲೂಕಿನಲ್ಲಿ 40,367 ಐಎಂಎಲ್ ಪೆಟ್ಟಿಗೆ, ಕುಂದಗೋಳ ತಾಲೂಕು 8,364 ಐಎಂಎಲ್ ಪೆಟ್ಟಿಗೆ ಮಾರಾಟವಾಗಿದೆ. ಇನ್ನು ಬಿಯರ್ ಖರೀದಿಯಲ್ಲೂ ಹುಬ್ಬಳ್ಳಿಗರು ಹಿಂದುಳಿದಿಲ್ಲ. ಹುಬ್ಬಳ್ಳಿಯಲ್ಲಿ 34,240 ಪೆಟ್ಟಿಗೆಗಳು ಬಿಯರ್ ಮಾರಾಟವಾಗಿದ್ದರೆ, ಧಾರವಾಡದಲ್ಲಿ 17,347 ಬಿಯರ್ ಪೆಟ್ಟಿಗೆ, ಕುಂದಗೋಳ ತಾಲೂಕಿನಲ್ಲಿ 1,526 ಬಿಯರ್ ಪೆಟ್ಟಿಗೆ ಮಾರಾಟವಾಗಿವೆ.
ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆ ಕಂಡಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಸಿಎಲ್-2, ಸಿಎಲ್-9, ಸಿಎಲ್-7, ಸಿಎಲ್-4, ಎಂಎಸ್ಐಎಲ್ ಸೇರಿ ಒಟ್ಟು 286 ಮದ್ಯ ಮಾರಾಟ ಮಳಿಗೆಗಳು ಇವೆ.
ಇದನ್ನೂ ಓದಿ: ದೇಶ, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ..