ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೃಷಿಗೆ ಅಗತ್ಯವಾದ ಯೂರಿಯಾ ಗೊಬ್ಬರದ ಅಭಾವ ತಲೆದೋರಿದ್ದು, ಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ. ಇತ್ತ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ರೈತರನ್ನು ಕೆರಳಿಸಿದೆ.
ಹೌದು.. ಕಳೆದ ಕೆಲ ದಿನಗಳಿಂದ ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ನಿರಂತರ ಸುರಿಯುತ್ತಿರುವುದರಿಂದ ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆ ಇದ್ದಾಗ ಯೂರಿಯಾ ಗೊಬ್ಬರ ಕೊರತೆಯಾಗಿರುವುದರಿಂದ ರೈತ ಕಂಗಾಲಾಗಿದ್ದಾನೆ. ಕೆಲ ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರವೊಂದನ್ನೇ ಕೇಳಿದರೆ ಸ್ಟಾಕ್ ಇಲ್ಲ ಎಂಬ ಉತ್ತರ ಬರುತ್ತಿದ್ದು, ಯೂರಿಯಾ ಗೊಬ್ಬರ ಜೊತೆಗೆ ಬೇರೆ ಗೊಬ್ಬರ, ಕೀಟನಾಶಕ ಖರೀದಿಸುತ್ತೇನೆಂದರೆ ಮಾತ್ರ ಯೂರಿಯಾ ಗೊಬ್ಬರ ಸಿಗುವಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಅಧಿಕಾರಿಗಳು ಹಾಗೂ ವರ್ತಕರನ್ನು ರೈತರು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ.
ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ರೈತರು ಪರದಾಡುತ್ತಿದ್ದಾರೆ. ಈ ವರ್ಷ ಪ್ರದೇಶಗಳಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಸಾಲಸೋಲ ಮಾಡಿ ಬಿತ್ತನೆ ಕಾರ್ಯ ಸಹ ಮಾಡಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ಸರ್ಕಾರಗಳು ತಾವು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈ ಹಿಂದೆ ಸ್ವತಃ ಕೃಷಿ ಸಚಿವರು ಹುಬ್ಬಳ್ಳಿಯಲ್ಲಿ ರೈತರ ಜೊತೆಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ರಸಗೊಬ್ಬರ ಕೊರತೆಯಾಗದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಲಾಗಿದೆ ಎಂದು ಭರವಸೆ ನೀಡಿದ್ದರು.
ಆದರೆ ಈಗ ನೋಡಿದರೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಿಕ್ಕರೆ ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡಲಾಗುತ್ತಿರುವ ಆರೋಪ ಕೇಳಿ ಬರುತ್ತಿದೆ. ಇನ್ನು ಚೀಲದ ಮೇಲೆ ನಮೂದಿಸಿರುವ ಬೆಲೆಗೆ ಮಾರಾಟ ಮಾಡಿ, ರಶೀದಿ ಕೊಡಬೇಕು. ತಪ್ಪಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎನ್ನುವ ಹೇಳಿಕೆಯನ್ನು ಪ್ರತಿ ವರ್ಷ ಕೃಷಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮಾಧ್ಯಮಗಳ ಮೂಲಕ ಹೇಳುತ್ತಾ ಬಂದಿದ್ದಾರೆ.
ಒಟ್ಟಿನಲ್ಲಿ ಸಾಲಸೋಲ ಮಾಡಿಕೊಂಡು ಬೀಜ ಬಿತ್ತಿದ್ದ ರೈತರಿಗೆ ಗೊಬ್ಬರ ಕೊರತೆ ಎದ್ದು ಕಾಣುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ನಿಜವಾಗಿಯೂ ಯೂರಿಯಾ ಕೊರತೆ ಇದೆಯೋ ಅಥವಾ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೋ ಎಂಬ ಶಂಕೆ ಮೂಡಿದ್ದು, ಕೂಡಲೇ ಸರ್ಕಾರ ಇದನ್ನು ಸರಿಪಡಿಸಲು ಮುಂದಾಗಬೇಕಿದೆ.