ಕಲಘಟಗಿ: ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ಕೊರತೆ ನೀಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಾಸಕ ಸಿ ಎಂ ನಿಂಬಣ್ಣವರ ಭರವಸೆ ನೀಡಿದರು.
ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕೊರತೆಯ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ, ತಾಲೂಕಿನಲ್ಲಿ ಕೋವಿಡ್ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಕೊವಿಡ್ ನೋಡಲ್ ಅಧಿಕಾರಿ ಡಾ.ಬಸವರಾಜ ಬಾಸೂರ ಹಾಗೂ ವೈದ್ಯಾಧಿಕಾರಿ ಮೋತಿಲಾಲ್ ಚವ್ಹಾಣ್ ಮಾತನಾಡಿ, ಸದ್ಯ ಮೂವರು ವೈದ್ಯರು, 15 ಮಹಿಳಾ ಆರೋಗ್ಯ ಸಹಾಯಕಿಯರು ಹಾಗೂ 8 ಪುರುಷ ಆರೋಗ್ಯ ಸಹಾಯಕರ ಕೊರತೆ ಇದೆ.
ಇರುವ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ತಾ.ಪಂ ಅಧ್ಯಕ್ಷೆ ಸುನೀತಾ ಮ್ಯಾಗಿನಮಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಇಒ ಎಂ.ಎಸ್ ಮೇಟಿ, ಕೆಡಿಪಿ ಸದಸ್ಯರಾದ ಯಲ್ಲಾರಿ ಶಿಂಧೆ, ಚಂದ್ರಗೌಡ ಪಾಟೀಲ, ಬಸವರಾಜ ಅಳ್ಳಿಗೇರಿ, ಯಲ್ಲಪ್ಪ ಕುಂದಗೋಳ, ಗಣಪತಿ ಪದ್ಮಣ್ಣವರ, ಬಸವ್ವ ಬಸರಿಕೊಪ್ಪ, ಜಿ.ಪಂ ಸದಸ್ಯರಾದ ಈರವ್ವ ದಾಸನಕೊಪ್ಪ, ವಿದ್ಯಾ ಭಾವನವರ, ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಇದ್ದರು.