ಹುಬ್ಬಳ್ಳಿ: ಕೊರೊನಾ ಪರಿಣಾಮದಿಂದ ವಾಣಿಜ್ಯೋದ್ಯಮಕ್ಕೆ ನೇರವಾಗಿ ಪೆಟ್ಟು ಬಿದ್ದಿದೆ. ಆರ್ಥಿಕ ಕುಸಿತದ ನಡುವೆ ಈಗ ವಾಣಿಜ್ಯೋದ್ಯಮಕ್ಕೆ ಕಾರ್ಮಿಕರ ಕೊರತೆ ತಲೆದೋರಿದೆ.
ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳಿವೆ. ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹೊರ ರಾಜ್ಯದಿಂದ ಬಂದಿದ್ದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಈಗ ಕಾರ್ಮಿಕರು ಮರಳಿ ಊರಿಗೆ ಹೋಗಿದ್ದು, ಕಟ್ಟಡ ನಿರ್ಮಾಣ, ಪೇಂಟಿಂಗ್, ಕಾರ್ಪೆಂಟರ್, ಹೋಟೆಲ್‌ಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದ ಸಾವಿರಾರು ಅನ್ಯರಾಜ್ಯಗಳ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ಹೋಗಿದ್ದಾರೆ. ಹೀಗಾಗಿ ಬಹುತೇಕ ಕೈಗಾರಿಕೆಗಳಿಂದ ಹಿಡಿದು ಸಣ್ಣಪುಟ್ಟ ವ್ಯಾಪಾರ ವ್ಯವಹಾರ ನಡೆಸುವುದೂ ಕಷ್ಟವಾಗಿದೆ.
ಇದುವರೆಗೆ ವಿಶೇಷ ರೈಲುಗಳ ಮೂಲಕ ಧಾರವಾಡ ಜಿಲ್ಲೆಯಿಂದ 15 ಸಾವಿರ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದಾರೆ. ಉತ್ತರ ಪ್ರದೇಶಕ್ಕೆ 7,528, ರಾಜಸ್ಥಾನಕ್ಕೆ 2,795, ಬಿಹಾರಕ್ಕೆ 3,160, ಜಾರ್ಖಂಡ್ 1,477 ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಧಾರವಾಡ ಜಿಲ್ಲೆ ತೊರೆದಿದ್ದಾರೆ.
ಹೊರ ರಾಜ್ಯದ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳುತ್ತಿದ್ದಂತೆ ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾಗಿದ್ರೂ, ಕಾರ್ಮಿಕರು ಮಾತ್ರ ಬೇಕಾದಷ್ಟು ಸಂಖ್ಯೆಯಲ್ಲಿ ಸಿಗ್ತಿಲ್ಲ. ಇನ್ನು ಇಲ್ಲಿಯ ಜನರಿಗೆ ಕೌಶಲ್ಯದ ಕೊರತೆಯೂ ಇದೆ. ಲಾಕ್‌ಡೌನ್ ಇದ್ದಾಗ ಒಂದು ತರಹದ ಸಂಕಷ್ಟ ಅನುಭವಿಸಿದ್ರೆ, ಲಾಕ್‌ಡೌನ್ ಸಡಿಲವಾಗ್ತಿದ್ದಂತೆ ಮತ್ತೊಂದು ರೀತಿಯ ಸಂಕಷ್ಟ ಎದುರಾಗಿದ್ದು ವ್ಯಾಪಾರ, ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ.