ಹುಬ್ಬಳ್ಳಿ: ಜಿಲ್ಲೆಯಲ್ಲಿ ಬಡವರ ಪಾಲಿನ ಸಂಜೀವಿನಿಯಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಿಮ್ಸ್ ಕರ್ತವ್ಯ ನಿರ್ವಹಿಸುತ್ತಿದೆ. ಆದರೆ ಸಂಸ್ಥೆಯ ಪರಿಸ್ಥಿತಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತಾಗಿದೆ. ಕಿಮ್ಸ್‌ಗೆ ಅನುದಾನ ನೀಡುವಲ್ಲಿ ಸರ್ಕಾರ ಜಿಪುಣತನ ತೋರುತ್ತಿದ್ದು ಬೆಂಗಳೂರು, ಮೈಸೂರು ಮೆಡಿಕಲ್ ಕಾಲೇಜುಗಳಿಗೆ ಸಿಂಹಪಾಲು ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬೇರೆ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಿಗೆ ಸಿಗುವ ಅನುದಾನಕ್ಕೂ ಹುಬ್ಬಳ್ಳಿಯ ಕಿಮ್ಸ್‌ಗೆ ಸಿಗುವ ಅನುದಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲದೇ, ಅನುದಾನದ ಕೊರತೆಯಿಂದ ಉಪಕರಣಗಳ ಸಮಸ್ಯೆ ಹಾಗೂ ಸಿಬ್ಬಂದಿಯ ಕೊರತೆ ಎದುರಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಇಡೀ ಉತ್ತರಕರ್ನಾಟಕದಲ್ಲಿ ಕಿಮ್ಸ್ ಆಸ್ಪತ್ರೆ ಮಾತ್ರ ಅತ್ಯುತ್ತಮ ವೈದ್ಯಕೀಯ ಸಿಬ್ಬಂದಿ ಹಾಗೂ ಉತ್ತಮ ಸೌಲಭ್ಯ ಇರುವ ಆಸ್ಪತ್ರೆ. ಜನಸಾಂದ್ರತೆಯನ್ನು ಗಮನಿಸಿದರೆ ಹೆಂಗಪ್ಪಾ ಇದನ್ನು ಮ್ಯಾನೇಜ್ ಮಾಡೋದು ಅನ್ಸುತ್ತೆ. ಈಗ ಅದನ್ನೇ ನಾನು ಡೈರೆಕ್ಟರ್ ಮುಂದೆ ಹೇಳಿಬಂದೆ. ಇಲ್ಲಿರುವ ಸಿಬ್ಬಂದಿ ಕೊರತೆ ಬಗ್ಗೆ ನಾವು ಸಿಎಂ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತರುತ್ತೇವೆ. ಆದಷ್ಟು ಬೇಗ ಇದಕ್ಕೆ ಪರಿಹಾರ ತರುವ ಪ್ರಯತ್ನವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿಗೆ 360 ಕೋಟಿ ರೂಪಾಯಿ, ಮೈಸೂರು ಮೆಡಿಕಲ್ ಕಾಲೇಜ್‌ಗೆ 219 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಕಿಮ್ಸ್ ವೈದ್ಯಕೀಯ ಸಿಬ್ಬಂದಿಗೆ ವೇತನಸಹಿತ (149 ಕೋಟಿ ರೂ.) ಒಟ್ಟು 210 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಹೆಚ್ಚುವರಿ ಅನುದಾನ ನೀಡಿಲ್ಲ: ಆರ್ಥಿಕ ಸೌಲಭ್ಯ 103 ರ ಅಡಿಯಲ್ಲಿ ಕಿಮ್ಸ್‌ಗೆ ಇನ್ನೂ 20 ರಿಂದ 25 ಕೋಟಿ ರೂ. ಅನುದಾನ ನೀಡಿದರೆ, ಎಲ್ಲ ರೀತಿಯ ಅಭಿವೃದ್ಧಿಗೆ ಸಹಕಾರ ಸಿಗಲಿದೆ. ಉತ್ತರ ಕರ್ನಾಟಕದ 8 ಜಿಲ್ಲೆಗಳ ಜನರು ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ನಿತ್ಯ ಹೊರರೋಗಿಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚಿದೆ. ಒಳ ರೋಗಿಗಳ ಸಂಖ್ಯೆ ಸಾವಿರ ಇದೆ. ಇನ್ನಾದರೂ ರಾಜ್ಯ ಸರ್ಕಾರ ಕಿಮ್ಸ್ ಸೇವೆಯನ್ನು ಪರಿಗಣಿಸಿ ಸೂಕ್ತ ಅನುದಾನ ನೀಡಬೇಕಿದೆ ಎಂಬ ಒತ್ತಾಯ ಸಾರ್ವಜನಿಕರದ್ದು.
ಇದನ್ನೂ ಓದಿ: ಜೆಡಿಎಸ್ಗೆ ಮತ ಹಾಕುವಂತೆ ನನಗೆ ಕರೆ ಬಂದಿಲ್ಲ: ಶಾಸಕ ಎಸ್. ಆರ್ ಶ್ರೀನಿವಾಸ್