ಧಾರವಾಡ: ಸಚಿವ ದಿ. ಸಿ.ಎಸ್.ಶಿವಳ್ಳಿಯವರ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭೆಗೆ ನಡೆದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲವು ಸಾಧಿಸಿದ್ದಾರೆ.
ಕುಸುಮಾ ಶಿವಳ್ಳಿಯವರಿಗೆ ಪ್ರತಿಸ್ಪರ್ಧಿಯಾಗಿ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದಿ. ಸಿ.ಎಸ್.ಶಿವಳ್ಳಿಯವರಿಂದ ಕೇವಲ 634 ಮತಗಳ ಅಂತರದಿಂದ ಪರಾಜಿತಗೊಂಡಿದ್ದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ್ ಅವರೇ ಈ ಬಾರಿ ಕಣಕ್ಕಿಳಿದಿದ್ದರು. ಆದರೆ ಕುಸುಮಾ ಶಿವಳ್ಳಿ ಕೂಡ ಎಸ್.ಐ.ಚಿಕ್ಕನಗೌಡರ್ ಅವರನ್ನ ಸೋಲಿಸುವ ಮೂಲಕ ಕುಂದಗೋಳ ವಿಧಾನಸಭಾ ಚುನಾವಣೆಯಲ್ಲಿ ವಿಜಯದ ಪತಾಕೆ ಹಾರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ 77 ಸಾವಿರದ 318 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ 76 ಸಾವಿರದ 41 ಮತ ಪಡೆದುಕೊಂಡಿದ್ದಾರೆ. ಈ ಮೂಲಕ ಕುಸುಮಾ ಶಿವಳ್ಳಿಯವರು 1,277 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಫಲ ನೀಡಿದ ಅನುಕಂಪದ ಅಲೆ:
ದಿ. ಸಿ.ಎಸ್.ಶಿವಳ್ಳಿಯವರ ನಿಧನದ ಹಿನ್ನೆಲೆಯಲ್ಲಿ ಘೋಷಣೆಯಾಗಿದ್ದ ಉಪಚುನಾವಣೆಯಲ್ಲಿ ಸಿ.ಎಸ್.ಶಿವಳ್ಳಿಯವರ ಜನಪರ ಕಾರ್ಯ ಹಾಗೂ ಅನುಕಂಪದ ಅಲೆಯೂ ಈ ಸಮಯದಲ್ಲಿ ಪ್ಲಸ್ ಪಾಯಿಂಟ್ ಆಗಿ ಗೆಲುವು ಸಾಧಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕ್ಷೇತ್ರದ ಜನರಿಗೆ ಡಿ.ಕೆ.ಶಿವಕುಮಾರ್ ಧನ್ಯವಾದ:
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರನ್ನು ಗೆಲ್ಲಿಸಿದ ಕುಂದಗೋಳ ವಿಧಾನಸಭಾ ಕ್ಷೇತ್ರದ ಜನರಿಗೆ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ದಿ. ಶಿವಳ್ಳಿ ಅವರು ಮಾಡಿದ್ದ ಜನಪರ ಕೆಲಸಗಳು, ಅವರ ಮೇಲೆ ಕ್ಷೇತ್ರದ ಜನ ಇಟ್ಟಿದ್ದ ಅಗಾಧ ಪ್ರೀತಿ, ಗೌರವ ಅವರ ಪತ್ನಿ ಕುಸುಮಾ ಶಿವಳ್ಳಿ ಅವರನ್ನು ಗೆಲುವಿನ ದಡ ಮುಟ್ಟಿಸಿದೆ ಎಂದಿದ್ದಾರೆ.