ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ.
ಬಿಜೆಪಿಯ ಎಸ್.ಐ.ಚಿಕ್ಕನಗೌಡ್ರ ಚರ ಹಾಗೂ ಸ್ಥಿರಾಸ್ತಿ ಸೇರಿ ಅಂದಾಜು 6 ಕೋಟಿ ರೂ. ಒಡೆಯರಾಗಿದ್ದರೆ, ಕಾಂಗ್ರೆಸ್ನ ಕುಸುಮಾ ಶಿವಳ್ಳಿ ಒಂದು ಕೋಟಿಗೂ ಅಧಿಕ ಆಸ್ತಿ ಹೊಂದಿರುವುದಾಗಿ ಅಫಿಡವಿಟ್ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಆಸ್ತಿ ವಿವರ:
ಎಸ್.ಐ.ಚಿಕ್ಕನಗೌಡ ಅವರ ಚರಾಸ್ತಿಗಳ ಒಟ್ಟು ಮೌಲ್ಯ 74.86 ಲಕ್ಷ ರೂ.ಗಳಾದರೆ, ಸ್ಥಿರಾಸ್ತಿ ಮೌಲ್ಯ ಅದರಲ್ಲಿ ಸ್ವಯಾರ್ಜಿತ 54.67 ಲಕ್ಷ, ಖರೀದಿ ನಂತರ ಸ್ಥಿರಾಸ್ತಿ ಅಭಿವೃದ್ಧಿ ವೆಚ್ಚ 70 ಲಕ್ಷ ರೂ., ಒಟ್ಟು ಸ್ವಯಾರ್ಜಿತ ಸ್ವತ್ತುಗಳು 450.66 ಲಕ್ಷ ರೂ., ಪಿತ್ರಾರ್ಜಿತ ಸ್ವತ್ತುಗಳ ಒಟ್ಟು ಮೌಲ್ಯ 17 ಲಕ್ಷ ರೂ. ಎಂದು ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ.
ಇವರ ಪತ್ನಿ ಶಂಕ್ರವ್ವ ಅವರ ಚರಾಸ್ತಿ ಮೌಲ್ಯ 37 ಲಕ್ಷ ರೂ. ಇದ್ದು, ಇವರ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಇರುವುದಿಲ್ಲ. ಅವರ ಬಳಿ 15 ಲಕ್ಷ ರೂ., ಪತ್ನಿ ಬಳಿ 5 ಲಕ್ಷ ರೂ. ನಗದು ಇಟ್ಟುಕೊಂಡಿದ್ದಾರೆ. 2.20 ಎಕರೆಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ 66.70 ಚ.ಅ. ಕಟ್ಟಡ ಹೊಂದಿದ್ದಾರೆ. ಅದರಗುಂಚಿಯಲ್ಲಿ ಎಂಟು ಗುಂಟೆ, ಹುಬ್ಬಳ್ಳಿ ವಿದ್ಯಾನಗರದಲ್ಲಿ 3 ಗುಂಟೆ, ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ 360 ಚ.ಮೀ. ಜಾಗ ಹಾಗೂ ವಸತಿ ಕಟ್ಟಡಗಳನ್ನು ಹೊಂದಿರುವುದಾಗಿ ಅವರು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಆಸ್ತಿ ವಿವರ:
ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರು ಒಟ್ಟು 1,23,69,125 ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿದ ಘೊಷಣಾ ಪತ್ರದಲ್ಲಿ ತಿಳಿಸಿದ್ದಾರೆ. ತಮ್ಮ ಬಳಿ 2 ಲಕ್ಷ ರೂ. ನಗದು, 81.62 ಲಕ್ಷ ರೂ.ಗಳ ಚರಾಸ್ತಿ ಹಾಗೂ 41.98 ಲಕ್ಷ ರೂ.ಗಳ ಸ್ಥಿರಾಸ್ತಿ ಹೊಂದಿದ್ದೇನೆ. ಮೂವರು ಮಕ್ಕಳಲ್ಲಿ ಒಬ್ಬಳ ಬಳಿ ಮಾತ್ರ 5 ಸಾವಿರ ರೂ. ನಗದು ಇದೆ ಎಂದು ಅವರು ವಿವರಿಸಿದ್ದಾರೆ.
ಪತಿ ಸಿ.ಎಸ್.ಶಿವಳ್ಳಿಯವರು ಕಳೆದ ಮಾರ್ಚ್ 22ರಂದು ನಿಧನ ಹೊಂದಿದ್ದು, ಅವರ ಹೆಸರಲ್ಲಿದ್ದ ಚರ ಮತ್ತು ಸ್ಥಿರ ಆಸ್ತಿ ಕಾನೂನಿನ ಪ್ರಕಾರ ಇನ್ನೂ ತಮ್ಮ ಹೆಸರಿಗೆ ವರ್ಗಾವಣೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
2 ಲಕ್ಷ ರೂ. ಬೆಲೆಯ ಟೊಯೊಟಾ ಕಾರ್, 7 ಲಕ್ಷ ರೂ. ಬೆಲೆಯ 250 ಗ್ರಾಂ ಬಂಗಾರದ ಆಭರಣ, 50 ಸಾವಿರ ರೂ. ಬೆಲೆಯ ಬೆಳ್ಳಿ ಪೂಜಾ ಸಾಮಗ್ರಿಗಳು, ಬ್ಯಾಂಕ್ ಖಾತೆಯಲ್ಲಿಯ ಮೊತ್ತ ಮೊದಲಾದವು ಚರಾಸ್ತಿಯಲ್ಲಿ ಸೇರಿವೆ. ಕಲಘಟಗಿ ಪಟ್ಟಣದಲ್ಲಿ 11, ಧಾರವಾಡ ತಾಲೂಕು ಸತ್ತೂರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 1 ಬಿನ್‍ಶೇತಕಿ ಪ್ಲಾಟ್ ಸೇರಿ 25.98 ಲಕ್ಷ ರೂ.ಗಳ ಸ್ಥಿರಾಸ್ತಿ, ಲಕ್ಷ್ಮೇಶ್ವರದಲ್ಲಿ 1 ಪ್ಲಾಟ್ (ಸದ್ಯದ ಬೆಲೆ 16 ಲಕ್ಷ ರೂ.) ಆಸ್ತಿ ಹೊಂದಿದ್ದಾರೆ. 2,50,354 ರೂ. ಬ್ಯಾಂಕ್ ಸಾಲವನ್ನೂ ಅವರು ಹೊಂದಿದ್ದಾರೆ. ಅವರು ಎಸ್‍ಎಸ್‍ಎಲ್‍ಸಿ ಓದಿರುವುದಾಗಿ ತಿಳಿಸಿದ್ದಾರೆ. ಸರ್ಕಾರಕ್ಕೆ ಯಾವುದೇ ಶುಲ್ಕ ಪಾವತಿಸುವುದು ಬಾಕಿ ಇಲ್ಲ ಎಂದು ಅಫಿಡವಿಟ್‍ನಲ್ಲಿ ತಿಳಿಸಿದ್ದಾರೆ.