ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿ ಕಿರಣ ಅವರು ನಕಲಿ ದಾಖಲೆ ಸೃಷ್ಟಿಸಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕಾಗಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆ ಮುಖಂಡರು, ಮೂಲ ದಾಖಲಾತಿಯನ್ನು ಮತ್ತೊಮ್ಮೆ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಚ್ಚರಿಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ: ಟಿಕೆಟ್ ಘೋಷಿಸದ 35 ಕ್ಷೇತ್ರದ ಬಗ್ಗೆ ಹೆಚ್ಚಿದ ಕುತೂಹಲ
ಡಾ.ಕ್ರಾಂತಿ ಕಿರಣ್ ಸರ್ಕಾರಿ ಸೇವೆಗೆ ಸಲ್ಲಿಸಿದ್ದ ದಾಖಲೆಯೇ ಬೇರೆ. ಪ್ರಸ್ತುತ ಇರುವ ದಾಖಲೆಯೇ ಬೇರೆ. ಕಿಮ್ಸ್ನಲ್ಲಿ ವೈದ್ಯಕಿಯ ವೃತ್ತಿ ಪಡೆಯಲು ಸರ್ಕಾರಿ ಸೇವೆ ದಾಖಲೆಯ ಜಾತಿ ಕಾಲಂನಲ್ಲಿ ಹಿಂದೂ ಒಕ್ಕಲಿಗ ಎಂದು ನಮೂದು ಮಾಡಲಾಗಿದೆ. ಮೂಲ ವಿಳಾಸ ಬೆಂಗಳೂರಿನಲ್ಲಿದೆ. ಆದರೆ, ಸದ್ಯದ ದಾಖಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಮೂಲ ವಿಳಾಸ ರಾಮನಗರದ ಚನ್ನಪಟ್ಟಣ ಅಂತಿದೆ. ಹೀಗಾಗಿ ಕ್ರಾಂತಿ ಕಿರಣ್ ಪರಿಶಿಷ್ಟ ಜಾತಿಯವರಾ ಅಥವಾ ಒಕ್ಕಲಿಗರಾ ಎಂಬ ಅನುಮಾನವಿದ್ದು, ಚುನಾವಣೆಗೆ ಸ್ಪರ್ಧಿಸಲು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಮೂಲ ದಾಖಲಾತಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಒಂದು ವೇಳೆ ಅವರು ನಕಲಿ ದಾಖಲಾತಿ ನೀಡಿದ್ದರೆ ಕ್ರಮ ತಗೆದುಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾರುತಿ ದೊಡ್ಡಮನಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಶಿಗ್ಗಾಂವಿ ಫಿಕ್ಸ್, ಹಾವೇರಿಯ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ.. ಎರಡು ಕ್ಷೇತ್ರ ಸಸ್ಪೆನ್ಸ್
ಜಾತಿ ಪ್ರಮಾಣಪತ್ರದ ಆರೋಪವನ್ನು ಡಾ.ಕ್ರಾಂತಿ ಕಿರಣ ತಳ್ಳಿ ಹಾಕಿದ್ದಾರೆ. ಯಾವುದೇ ನಕಲಿ ಜಾತಿ ಪ್ರಮಾಣಪತ್ರ ಪಡೆದಿಲ್ಲ. ನಾನು ಕೊಟ್ಟ ಪ್ರಮಾಣಪತ್ರದಲ್ಲಿ ಆರ್‌ಡಿ ನಂಬರ್ ಇದೆ. ಈಗಿನ ಕಾಲದಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ನಾನು ಕೊಟ್ಟ ಜಾತಿ ಪ್ರಮಾಣ ಪತ್ರ 100% ಸತ್ಯ. ಇದನ್ನು ಯಾರು ಎಲ್ಲಿ ಬೇಕಾದರೂ ಪರೀಕ್ಷಿಸಬಹುದು. ನಾನು ಯಾವ ಊರಿಂದ ಬಂದಿದ್ದೇನೆ, ಯಾವ ತಾಲೂಕು ಎಲ್ಲವೂ ನಾನು ಕೊಟ್ಟ ಜಾತಿ ಪ್ರಮಾಣಪತ್ರದಲ್ಲಿದೆ. ಕಿಮ್ಸ್ ಆಸ್ಪತ್ರೆಯಲ್ಲಿ 2009-12ರ ವರೆಗೆ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದೆ. ಆಸ್ಪತ್ರೆಯ ಸರ್ವಿಸ್ ಬುಕ್ ಗೌಪ್ಯವಾಗಿರುತ್ತದೆ. ಅದರಲ್ಲಿ ಏನು ನಮೂದಾಗಿದೆ ಎಂಬುದು ಗೊತ್ತಿಲ್ಲ. ಚುನಾವಣಾ ಆಯೋಗಕ್ಕೆ ದೂರು ಕೊಡಲಿ, ನಾನು ತನಿಖೆಗೆ ಸಿದ್ದ. ಯಾವುದೇ ಮಟ್ಟದಲ್ಲಿ ತನಿಖೆಯಾಗಲಿ, ಅದರಲ್ಲಿ ಯಾವುದೇ ಸಂಶಯ ಬೇಡ ಎಂದರು.
ಇದನ್ನೂ ಓದಿ: ನಿಯಂತ್ರಣವಿಲ್ಲದ ಮಾತು, ಪುತ್ರ ವ್ಯಾಮೋಹದಿಂದಾಗಿ ಈಶ್ವರಪ್ಪ ಚುನಾವಣೆಯಿಂದ ಔಟ್: ಆಯನೂರು ಮಂಜುನಾಥ್