ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆ ಕೇಂದ್ರಗಳಿಗೆ ಕೆಪಿಎಸ್ಸಿ ಸದಸ್ಯ ಡಾ.ರಂಗರಾಜ ವನದುರ್ಗ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಕರ್ನಾಟಕ ಕಾಲೇಜು, ಕಿಟೆಲ್ ಕಾಲೇಜು, ಕರ್ನಾಟಕ ಹೈಸ್ಕೂಲ್, ಬಾಸೆಲ್ ಮಿಷನ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಕರ್ನಾಟಕ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿನ ಅನುಸರಿಸುತ್ತಿದ್ದೀರಾ ಎಂಬುದರ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ನಿಯೋಜಿತ ಪರೀಕ್ಷಾ ಕೇಂದ್ರಗಳು ಏರ್ಪಡಿಸಿದ್ದ ಸಿದ್ಧತೆಗಳು ಕ್ರಮಬದ್ಧವಾಗಿದ್ದವು. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ನೀಡಿದ ಸಹಕಾರ ತುಂಬಾ ಸ್ತುತ್ಯರ್ಹವಾಗಿತ್ತು. ಅಭ್ಯರ್ಥಿಗಳು ಪರೀಕ್ಷೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಬರೆಯುತ್ತಿರುವುದು ಕಂಡು ಬಂದಿತು ಎಂದರು.
ಎಲ್ಲ ಪರೀಕ್ಷಾ ಕೇಂದ್ರಗಳು ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಪರೀಕ್ಷೆ ನಡೆಸಿದ್ದಾರೆ ಎಂದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಂದ ಮಾಹಿತಿ ಪಡೆದರು.