ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಹೆಚ್ ಕೋನರೆಡ್ಡಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸಾಕಷ್ಟು ಪರಿಶ್ರಮ ಪಟ್ಟಿದ್ದೆ. ಕನಿಷ್ಠ 10 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೆವು. ಆದರೆ ಇತ್ತೀಚಿನ ಚುನಾವಣಾ ಕಾರ್ಯವೈಖರಿಯಿಂದ ಬೇಸತ್ತು ತಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.
ನಮ್ಮ ಪಕ್ಷದ ಅಭ್ಯರ್ಥಿ 25ನೇ ವಾರ್ಡ್ನ ಲಕ್ಷ್ಮಿ ಹಿಂಡಸಗೇರಿ ಗೆಲುವು ಸಾಧಿಸಿದ್ದಾರೆ. 2ನೇ, 3ನೇ ಸ್ಥಾನದಲ್ಲಿ ಮೂವರು ಅಭ್ಯರ್ಥಿಗಳು ಬಂದು, ಕೆಲವೇ ಮತಗಳಿಂದ ಸೋಲು ಕಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದಕ್ಕೆ ನಮ್ಮ ಯಾವುದೇ ಪಾತ್ರವಿಲ್ಲ. ಆದ್ರೆ ಕಲಬುರಗಿ ಪಾಲಿಕೆಯಲ್ಲಿ ನಮ್ಮ ಪಕ್ಷ ನಿರ್ಣಾಯಕವಾಗಿದೆ. ನಮ್ಮ ನಾಯಕರಾದ ಹೆಚ್ ಡಿ ಕುಮಾರಸ್ವಾಮಿ ಸೂಕ್ತ ನಿರ್ಧಾರ ತಗೆದುಕೊಳ್ಳಲಿದ್ದಾರೆ ಎಂದು ಕೋನರೆಡ್ಡಿ ತಿಳಿಸಿದರು.
ಓದಿ: ಹು-ಧಾ ಪಾಲಿಕೆ ಮೇಯರ್ ಪಟ್ಟಕ್ಕೆ ತೀವ್ರಗೊಂಡ ಪೈಪೋಟಿ: ಯಾರಿಗೆ ಒಲಿಯಲಿದೆ ಸ್ಥಾನ!