ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮೊನ್ನೆ ಗಣೇಶ ನಿಮಜ್ಜನದ ವೇಳೆ ಅಮಾಯಕರ ಮೇಲೆ ಚಾಕು ಇರಿತವಾದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೆ ಇಬ್ಬರಿಗೆ ಚಾಕು ಇರಿದಿರುವ ಪ್ರಸಂಗ ನಡೆದಿದೆ.
ಹಳೇ ಹುಬ್ಬಳ್ಳಿಯ ಅಜ್ಮಿರ್ ನಗರದಲ್ಲಿ ಜಾಕೀರ್ ಬಿರ್ಲಾ ಹಾಗೂ ಮುಲ್ಲಾಸಾಬ್ ರಜಾಕ್ ದೊಡ್ಡಮನಿ ಎನ್ನುವವರಿಗೆ ಚಾಕುವಿನಿಂದ ಇರಿಯಲಾಗಿದೆ.
ಪ್ರಶಾಂತ, ವೀರಣ್ಣ ಬಂಕಾಪುರ ಎಂಬ ಇಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಹಳೇ ವೈಷಮ್ಯವೇ ಚಾಕು ಇರಿತಕ್ಕೆ ಕಾರಣ ಎನ್ನಲಾಗಿದೆ.
ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊನ್ನೆಯಷ್ಟೆ ಗಣೇಶನ ನಿಮಜ್ಜನ ವೇಳೆ 9 ಜನರು ಗಾಯಗೊಂಡು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹಸಿರಾಗಿರುವಾಗಲೇ ಮತ್ತೆ ಚಾಕು ಇರಿತದಂತಹ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.