ಧಾರವಾಡ: ಜನ್ಮದಿನದಂದು ಉಚಿತ ಕಿಟ್ ವಿತರಣೆ ಹಿನ್ನೆಲೆ ಕಾಂಗ್ರೆಸ್ ಮುಖಂಡನ ಮನೆ ಮುಂದೆ ಜನರು ಮುಗಿಬಿದ್ದಿದ್ದಾರೆ.
ಮರಾಠ ಕಾಲೋನಿಯಲ್ಲಿರುವ ಮಾಜಿ ಪಾಲಿಕೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ದೀಪಕ ಚಿಂಚೂರೆ ಅವರ ಜನ್ಮದಿನದ ಪ್ರಯುಕ್ತ ಕಿಟ್ ವಿತರಣೆ ಮಾಡಲಾಗುತ್ತಿತ್ತು. ವಿಷಯ ತಿಳಿದು ಜನರು ಗುಂಪು-ಗುಂಪಾಗಿ ಕೂಡಿದ್ದಾರೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮುಗಿಬಿದ್ದಿದ್ದು, ಕಾಂಗ್ರೆಸ್ ಮುಖಂಡನನ್ನು ಮುಜುಗರಕ್ಕೀಡು ಮಾಡಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಮಾಸ್ಕ್ ಧರಿಸದೆ ಮಕ್ಕಳೊಂದಿಗೆ ಮಹಿಳೆಯರು ಆಗಮಿಸಿದ್ದಾರೆ. ಕೈ ನಾಯಕನ ಮನೆ ಮುಂದೆ ನೂಕು-ನುಗ್ಗಲು ನಡೆದ ವಿಷಯ ತಿಳಿದು ಸ್ಥಳಕ್ಕೆ ಉಪನಗರ ಪೊಲೀಸರು ಜನರನ್ನು ಚದುರಿಸಿದರು. ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಕಿಟ್ ವಿತರಣೆ ಮಾಡುತ್ತಿದ್ದ ಕೈ ನಾಯಕ, ಸ್ವಲ್ಪ ಕಿಟ್ ವಿತರಣೆ ಮಾಡಿ ಅರ್ಧಕ್ಕೆ ನಿಲ್ಲಿಸಿದ್ದು, ಬಂದವರು ಖಾಲಿ ಕೈಯಲ್ಲಿ ವಾಪಾಸ್ ತೆರಳಬೇಕಾಯಿತು.