ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದು ಕರೆಯಿಸಿಕೊಳ್ಳುವ ನಗರದ ಕಿಮ್ಸ್ ಆಸ್ಪತ್ರೆಯ ವೈದ್ಯರ ಕರ್ತವ್ಯದ ವಿಚಾರದಲ್ಲಿ ಬೇಜವಾಬ್ದಾರಿ ನಡೆ ಬಗ್ಗೆ ಇತ್ತೀಚೆಗಷ್ಟೆ ಕೇಂದ್ರ ಸಚಿವರು ಕಿಡಿಕಾರಿದ್ದರು. ಆದರೆ, ಇದೀಗ ಈ ಆಸ್ಪತ್ರೆಯ ವೈದ್ಯರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ನೂತನ ಪ್ಲಾನ್ಗೆ ಚಿಂತನೆ ನಡೆಸಿದೆ.
ಉತ್ತರ ಕರ್ನಾಟಕ ಭಾಗದ ಬಡ ಜನರ ಪಾಲಿಗೆ ಸಂಜೀವಿನಿ ಎಂದು ಕರೆಸಿಕೊಳ್ಳುವ ಕಿಮ್ಸ್ ಆಸ್ಪತ್ರೆ ಇಡೀ ಕರ್ನಾಟಕದಲ್ಲೇ ಅತಿ ಹೆಚ್ಚು ಹೆಸರು ಮಾಡಿದೆ. ಕೋವಿಡ್ ನಿರ್ವಹಣೆಯಲ್ಲಿ ಅದೇ ರೀತಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವಲ್ಲಿ ರಾಜ್ಯದಲ್ಲೇ ಮೊದಲ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 900ಕ್ಕೂ ಅಧಿಕ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.
ಆದರೆ, ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಹೊಂದಿರುವ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಪ್ರತಿ ತಿಂಗಳು ಸರ್ಕಾರದಿಂದ ಲಕ್ಷ ಲಕ್ಷ ಸಂಬಳ ತೆಗೆದುಕೊಂಡು ಕರ್ತವ್ಯಕ್ಕೆ ಹಾಜರಾಗೋದಿಲ್ಲ ಎಂಬ ಗಂಭೀರ ಆರೋಪವನ್ನು ಇತ್ತೀಚೆಗೆ ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಡಿದ್ದರು. ಈ ಹಿನ್ನೆಲೆ ಇದೀಗ ವೈದ್ಯರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಜಿಯೋ ಫೆನ್ಸಿಂಗ್ ಎಂಬ ನೂತನ ಪ್ಲಾನ್ಗೆ ಕಿಮ್ಸ್ ಚಿಂತನೆ ನಡೆಸಿದೆ.
ಕಿಮ್ಸ್ ಆಸ್ಪತ್ರೆಯ ವಿವಿಧ ವಿಭಾಗದಲ್ಲಿ 900ಕ್ಕೂ ಅಧಿಕ ವೈದ್ಯರು ಕಾರ್ಯ ನಿರ್ವಹಿಸುತ್ತಾರೆ. ಆದರೆ, ರೋಗಿಗಳ ಆರೈಕೆ ವಿಚಾರದಲ್ಲಿ ಸುಮಾರು ಪ್ರತಿಶತ ಶೇ. 60 ಜನ ವೈದ್ಯರು ಕರ್ತವ್ಯವವನ್ನೇ ಮರೆತು ಕಣ್ಣಾಮುಚ್ಚಾಲೆ ಆಟ ಆಡ್ತಾರೆ ಎಂದು ಸಚಿವರು ಆರೋಪ ಮಾಡಿದ್ದರು. ಈ ಹಿನ್ನೆಲೆ ಇದೀಗ ಪ್ರತಿಯೊಬ್ಬ ವೈದ್ಯರಿಗೆ ಟ್ಯಾಗ್ ಅಳವಡಿಕೆ ಮಾಡುವ ಮೂಲಕ ಅವರ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಹಾಗೂ ಕಿಮ್ಸ್ ಆಡಳಿತ ಮಂಡಳಿ ಚಿಂತನೆ ನಡೆಸಿದೆ.