ಹುಬ್ಬಳ್ಳಿ: ಕೊರೊನಾ ರೂಪಾಂತರಿ ವೈರಸ್ ಎದುರಿಸಲು ಉತ್ತರ ಕರ್ನಾಟಕ ಆರೋಗ್ಯ ಸಂಜೀವಿನಿ ಕಿಮ್ಸ್ ಆಸ್ಪತ್ರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ಹೇಳಿದರು.
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಕೋವಿಡ್ ಎದುರಿಸಲು ಜಿಲ್ಲಾಮಟ್ಟದ ಪೂರ್ವಭಾವಿ ಸಭೆ ಮಾಡಲಾಗಿದೆ. ನುರಿತ ತಜ್ಞ ವೈದ್ಯರಿಗೆ ಅವರವರ ಕೆಲಸಕ್ಕೆ ತಕ್ಕಂತೆ ಜವಾಬ್ಧಾರಿ ವಹಿಸಲಾಗಿದೆ. ಚಿಕಿತ್ಸೆಗಾಗಿ ಎರಡು ವಿಶೇಷ ವಾರ್ಡ್ ಮಾಡಿದ್ದು, 90 ಸಾಮಾನ್ಯ 10 ಐಸಿಯು ಸೇರಿದಂತೆ ಒಟ್ಟು 100 ಬೆಡ್ ವ್ಯವಸ್ಥೆಯಾಗಿದೆ. ಕಳೆದ ಕೋವಿಡ್ ಅಲೆಯಲ್ಲಿ 1 ಸಾವಿರ ಬೆಡ್ ವ್ಯವಸ್ಥೆ ಮಾಡಿ ಕಿಮ್ಸ್ ಯಶಸ್ಸು ಕಂಡಿದ್ದು, ಈ ಬಾರಿಯೂ ಯಾವುದಕ್ಕೂ ಕೊರತೆಯಾಗದಂತೆ ತಯಾರಿ ಮಾಡಿಕೊಂಡಿದ್ದೇವೆ ಎಂದರು.
ಕಿಮ್ಸ್‌ನಲ್ಲಿ 40 ಕೆಎಲ್ ಆಕ್ಸಿಜನ್ ಪ್ಲಾಂಟ್ ಇದೆ. ಹೀಗಾಗಿ ಕೊರತೆ ಇಲ್ಲ. ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಜವಾಬ್ದಾರಿ ನೀಡಲಾಗಿದೆ. ಅವರು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಯಾವುದೇ ಮಾನವ ಸಂಪನ್ಮೂಲದ ಕೊರತೆ ಸದ್ಯಕ್ಕಿಲ್ಲ. ವೈದ್ಯಕೀಯ ಸಿಬ್ಬಂದಿ, ನರ್ಸ್, ಆಂಬ್ಯುಲೆನ್ಸ್ ಡ್ರೈವರ್, ಮೃತದೇಹ ಹಸ್ತಾಂತರಕ್ಕೂ ತಂಡ ರಚನೆ ಮಾಡಲಾಗಿದೆ. ಕೇರಳದಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿದ್ದು ಬಿಟ್ಟರೆ ಇಲ್ಲಿಯವರೆಗೂ ಕರ್ನಾಟಕದಲ್ಲಿ ವರದಿಯಾಗಿಲ್ಲ.
ಕೊರೊನಾ ಪರೀಕ್ಷೆ, ದಾಖಲೆ, ಚಿಕಿತ್ಸೆ ನೀಡುವ ಕೆಲಸ ಆರಂಭಿಸಲಾಗಿದೆ. ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ಕೋವಿಡ್ ಲಕ್ಷಣಗಳು ಕಂಡುಬಂದವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಈ ಬಾರಿಯೂ ಅಗತ್ಯಕ್ಕೆ ತಕ್ಕಂತೆ ಬೆಡ್‌ಗಳ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕಮ್ಮಾರ್ ತಿಳಿಸಿದರು.
ಇದನ್ನೂ ಓದಿ: ಶಾಲಾ, ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯ ಕುರಿತು ನಿರ್ಧಾರವಾಗಿಲ್ಲ: ಸಚಿವ ಮಧು ಬಂಗಾರಪ್ಪ