ಹುಬ್ಬಳ್ಳಿ: ಕೊರೊನಾ ನಿಯಂತ್ರಣಕ್ಕೆ ತೊಡೆ ತಟ್ಟಿ ನಿಂತಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಜಿಲ್ಲಾಡಳಿತ ಮತ್ತೊಂದು ವ್ಯವಸ್ಥೆ ಕಲ್ಪಿಸಿದೆ. ಸಾರ್ವಜನಿಕರಿಗೆ ಪೂರಕ ಚಿಕಿತ್ಸೆ ನೀಡುವ ಸದುದ್ದೇಶದಿಂದ ಹೊಸ ನಿರ್ಧಾರವನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.
![Kims Hospital has increased its medical capacity](https://etvbharatimages.akamaized.net/etvbharat/prod-images/8165720_245_8165720_1595660582361.png)
ಹೌದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಖಾಸಗಿ ಆಸ್ಪತ್ರೆಯ ಮಾದರಿಯಲ್ಲಿಯೇ ಕಿಮ್ಸ್ನಲ್ಲಿಯೂ ಸೋಂಕಿತರ ಚಿಕಿತ್ಸೆಗಾಗಿ ಬೆಡ್ ಸಾಮರ್ಥ್ಯ ಹೆಚ್ಚಿಸಲಾಗಿದೆ. ಬೆಡ್ ಫುಲ್ ಆಗಿದೆ ಎಂಬ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಕಿಮ್ಸ್ ಮುಖ್ಯ ಕಟ್ಟಡದಲ್ಲಿ 1,002 ಬೆಡ್ಗಳಿದ್ದು, ಇವುಗಳಲ್ಲಿ 500 ಬೆಡ್ಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಈಗಾಗಲೇ ಕಿಮ್ಸ್ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.
ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈಗಾಗಲೇ 250 ಬೆಡ್ಗಳು ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದು, ಅವುಗಳೆಲ್ಲ ಭರ್ತಿಯಾಗಿವೆ. ಅಲ್ಲದೇ ಬಡ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ 301ರಿಂದ 305ನೇ ವಾರ್ಡ್ವರೆಗೂ ಕೋವಿಡ್ ವಾರ್ಡ್ ಆಗಿ ಪರಿವರ್ತನೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಆಕ್ಸಿಜನ್ ಲೈನ್, ಗ್ಯಾಸ್, ವಿದ್ಯುತ್ ಸೌಲಭ್ಯ ಹಾಗೂ ಐಸೋಲೇಷನ್ ವಾರ್ಡ್ ಸಿದ್ಧತೆ ಕೂಡ ಭರದಿಂದ ಸಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 30 ವೆಂಟಿಲೇಟರ್ಗಳಿದ್ದು, 250 ಹಾಸಿಗೆ ಸಿದ್ಧಪಡಿಸುತ್ತಿರುವುದರಿಂದ ಇನ್ನೂ 40 ವೆಂಟಿಲೇಟರ್ ನೀಡುವಂತೆ ಕಿಮ್ಸ್ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿದೆ.