ಹುಬ್ಬಳ್ಳಿ: ಕೋವಿಡ್-19 ಮಹಾಮಾರಿಯಿಂದ ಜಗತ್ತೇ ತತ್ತರಿಸಿದೆ. ಎಲ್ಲಾ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಕಾಡೆ ಮಲಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉದ್ಯಮಿಗಳ ಕೈ ಹಿಡಿಯುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಆದ್ರೆ, ಸರ್ಕಾರ ಕೆಐಎಡಿಬಿಯ ನಿವೇಶನಗಳಿಗೆ ಬೇಕಾಬಿಟ್ಟಿ ದರ ನಿಗದಿ ಮಾಡಿ, ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಮಾಡುತ್ತಿದೆ.
ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ, ಕೈ ಸುಟ್ಟುಕೊಂಡಿರುವ ಉದ್ಯಮಿಗಳ ಕೈ ಹಿಡಿಯಬೇಕಾದ ಸರ್ಕಾರ, ಮತ್ತಷ್ಟು ಸಂಕಷ್ಟಕ್ಕೆ ನೀಡುತ್ತಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿರುವ ಆರು ಕೈಗಾರಿಕಾ ಪ್ರದೇಶಗಳ ಪೈಕಿ, ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯಿಂದ ಉದ್ಯಮಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚಿಕೆ ವೇಳೆ ಬೆಲೆ ನಿಗದಿ ಕೂಡ ಮಾಡಲಾಗಿತ್ತು. ಆದರೆ, ಇದೀಗ ಏಕಾಏಕಿ ನಿವೇಶನಗಳಿಗೆ ಮೂರು ಪಟ್ಟು ಬೆಲೆ ಹೆಚ್ಚಳ ಮಾಡಲಾಗಿದೆ. ಇದರಿಂದ ಉದ್ಯಮಿಗಳು ಕಂಗಾಲಾಗಿದ್ದು, ಕೆಐಎಡಿಬಿ ನೀತಿಯ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿಗಳಿಗೆ ಒಂದು ಎಕರೆ ಜಮೀನಿಗೆ 40 ಲಕ್ಷ ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಮೊದಲು ನಿಗದಿ ಮಾಡಿದ್ದಕ್ಕಿಂತ ಹೆಚ್ಚಾಗಿ 70 ಲಕ್ಷ ರೂಪಾಯಿ ಬೆಲೆಯನ್ನು ಉದ್ಯಮಿಗಳು ನೀಡಬೇಕಾಗಿದೆ.
ಕೇವಲ 10 ರಿಂದ 20% ಬೆಲೆಯನ್ನು ಹೆಚ್ಚಳ ಮಾಡಬಹುದು ಅನ್ನೋ ಸರ್ಕಾರದ ನಿಯಮವಿದ್ದರೂ ಕೂಡ, ಅದನ್ನು ಗಾಳಿಗೆ ತೂರಿ ಕೆಐಎಡಿಬಿ 60 ರಿಂದ 70% ದರವನ್ನು ಹೆಚ್ಚಳ ಮಾಡಿದೆ. ಲಾಕ್‌ಡೌನ್ ಸಂಕಷ್ಟದಲ್ಲಿರುವ ಉದ್ಯಮಿಗಳ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಹಿನ್ನೆಲೆಯಲ್ಲಿ ಹಣ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.
ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಕೇಳಿದ್ರೆ, ಆ ರೀತಿಯ ಯಾವುದೇ ಹೆಚ್ಚಳ ಮಾಡುತ್ತಿಲ್ಲ. ಕೇವಲ 20% ಹೆಚ್ಚಿಳ ಮಾಡೋದಕ್ಕೆ ಹೇಳಿದ್ದೇನೆ. ಅಲ್ಲದೇ ಈ ಹಿಂದೆ ತೆಗೆದುಕೊಳ್ಳಲಾದ ನಿವೇಶನಗಳ ಹಣ ಬಾಕಿ ಉಳಿದಿದೆ. ಅದರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿದ್ದೇನೆ ಎಂದಿದ್ದಾರೆ.
ಮೊದಲೇ ಆರ್ಥಿಕವಾಗಿ ಕುಸಿದು ಹೋಗಿರುವ ಕೈಗಾರಿಕೆಗಳು ಒಂದೊಂದೇ ಬಾಗಿಲು ಮುಚ್ಚಿಕೊಂಡು ಮಕಾಡೆ ಮಲಗುತ್ತಿವೆ. ಇದರ ನಡುವೆ ಕೆಐಎಡಿಬಿ ನಿವೇಶನಕ್ಕೆ ಆಕಾಶದೆತ್ತರದ ಬೆಲೆ ನಿಗದಿ ಮಾಡಿರೋದು ಉದ್ಯಮಿಗಳಿಗೆ ಮತ್ತಷ್ಟು ಸಂಕಷ್ಟ ತಂದಿದೆ. ಕೈಗಾರಿಕಾ ಸಚಿವರ ತವರು ಜಿಲ್ಲೆಯಲ್ಲಿಯೇ ಉದ್ಯಮಿಗಳಿಗೆ ಬೇಕಾಬಿಟ್ಟಿ ದರ ನಿಗದಿ ಮಾಡಿರುವದು ತೀವ್ರ ಚರ್ಚೆಗೆ ಗ್ರಾಸವಾಗಿದೆ.