ಧಾರವಾಡ: ಕರ್ನಾಟಕ ವಿವಿ ವ್ಯಾಪ್ತಿಯ ಬಿಎಡ್ ರೆಗ್ಯೂಲರ್ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಆಧರಿಸಿ ಮುಂದಿನ ಸೆಮಿಸ್ಟರ್ಗೆ ಪ್ರಮೋಟ್ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಕುಲಪತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿಶ್ವವಿದ್ಯಾಲಯ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ಬಿ.ಎಡ್ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೊದಲು ಸಹ ಮನವಿ ಮಾಡಿಕೊಂಡಾಗ ಸಭೆ ಮಾಡುವುದಾಗಿ ತಿಳಿಸಿದ ಕವಿವಿ ಆಡಳಿತ ಮಂಡಳಿ, ಬಳಿಕ ಯಾವುದೇ ಸಭೆ ನಡೆಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಬಿ.ಎಡ್ ಪರೀಕ್ಷೆಗಳನ್ನು ಮುಂದೂಡಬೇಕು, ಕುಲಸಚಿವರು ಪ್ರತಿಭಟನಾ ಸ್ಥಳಕ್ಕೆ ಬರುವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಯಾವುದೇ ಕಾರಣಕ್ಕೂ ನಾವೂ ಪರೀಕ್ಷೆ ಬರೆಯಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯದವರು ರಾಜ್ಯ ಸರಕಾರದ ಆದೇಶದಂತೆ ಸೆಮಿಸ್ಟರ್ಗೆ ಪ್ರಮೋಟ್ ಮಾಡಿದ್ದಾರೆ. ಆದರೆ ನಮ್ಮಲ್ಲಿ ಯಾವುದೇ ಕಿಂಚಿತ್ತೂ ಬೆಲೆ ಕೊಡದೆ ಎಲ್ಲ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಆಡಳಿತ ಮಂಡಳಿ ಸಜ್ಜಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.