ಧಾರವಾಡ/ಬೆಳಗಾವಿ: ''ಕರ್ನಾಟಕದ ಚುನಾವಣೆ ಇಡೀ ದೇಶದ ರಾಜಕೀಯಕ್ಕೆ ದಿಕ್ಸೂಚಿಯಾಗಿದೆ. ಬದಲಾವಣೆಯ ದಿಕ್ಸೂಚಿ ಕರ್ನಾಟಕದಿಂದ ಆಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಇಲ್ಲಿಗೆ ನಿಲ್ಲುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುತ್ತದೆ. ಬಿಜೆಪಿ ಮನೆಗೆ ಕಳುಹಿಸುವ ಕೆಲಸ ಆಗುತ್ತದೆ'' ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.
ಸವದತ್ತಿಯಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹಮ್ಮಿಕೊಂಡಿದ್ದ ಮತದಾದರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ವಿಧಾನಸಭೆ ಚುನಾವಣೆ ಸೆಮಿ ಫೈನಲ್ ಆಗಿತ್ತು. ಲೋಕಸಭೆ ಚುನಾವಣೆ ಫೈನಲ್ ಮ್ಯಾಚ್ ಆಗಿದೆ. ಫೈನಲ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಚುನಾವಣೆಯಲ್ಲಿ ಭರವಸೆ ಕೊಟ್ಟಿರುತ್ತೇವೆ ಎಷ್ಟೋ ಸಲ ಸರ್ಕಾರ ಬಂದು ಆರು ತಿಂಗಳಾದರೂ ಭರವಸೆಗಳು ಈಡೇರಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ'' ಎಂದು ತಿಳಿಸಿದರು.
ಹೆದರಿಕೆ, ಬೆದರಿಕೆ ಯಾವುದೂ ನಡೆಯುವುದಿಲ್ಲ- ಶಟ್ಟರ್ ಕಿಡಿ: ''ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮಾತನಾಡಲು ಏನೂ ಇಲ್ಲ. ಗ್ಯಾರಂಟಿಯನ್ನು ವಿರೋಧ ಮಾಡುವ ಸ್ಥಿತಿಯೂ ಪ್ರತಿಪಕ್ಷಕ್ಕೆ ಇಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜನರಿಗೆ ತೊಂದರೆ ಕೊಡುತ್ತಿದೆ. ತಮ್ಮ ವಿರೋಧ ಪಕ್ಷದವರನ್ನು ಹೆದರಿಸುತ್ತಿದ್ದಾರೆ. ಆದರೆ, ಈ ಹೆದರಿಕೆ, ಬೆದರಿಕೆ ಯಾವುದೂ ನಡೆಯುವುದಿಲ್ಲ. ಜನ ನಿಮ್ಮನ್ನು ಎಲ್ಲಿ ಕಳುಹಿಸಬೇಕೋ ಅಲ್ಲಿಗೆ ಕಳುಹಿಸಿಯೇ ತೀರುತ್ತಾರೆ ಎಂದು ಹರಿಹಾಯ್ದರು. ವಿನಯ ಕುಲಕರ್ಣಿಗೆ ಬಹಳ ತೊಂದರೆ ಕೊಡುತ್ತಾರೆ. ಆದರೆ, ಕುಲಕರ್ಣಿಗೆ ಒಳ್ಳೆ ದಿನಗಳು ಬರುತ್ತವೆ. ಅವರಿಗೆ ತೊಂದರೆ ಕೊಟ್ಟವರಿಗೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಮುಂದೆಯೂ ಅವರಿಗೆ ಜನರೇ ಉತ್ತರ ಕೊಡುತ್ತಾರೆ'' ಎಂದರು.
ಶಾಸಕ ವಿನಯ್ ಕುಲಕರ್ಣಿ ಮಾತನಾಡಿ, ''ನನ್ನ ವಿರುದ್ಧ ಬಹಳ ಷಡ್ಯಂತ್ರ ನಡೆಯಿತು. ಆದರೆ, ಜನ ಬೆಂಬಲಕ್ಕೆ ನಿಂತು ನನ್ನ ಆರಿಸಿ ತಂದಿದ್ದೀರಿ. ಒಮ್ಮೆ ನನ್ನನ್ನು ಪಕ್ಷೇತರ ಆಗಿ ಆರಿಸಿ ತಂದಿದ್ರಿ. ಒಮ್ಮೆ 710 ಮತದಿಂದ ಸೋತಿದ್ದೆ. ರಾಜಕೀಯ ಯಾವತ್ತೂ ಶಾಶ್ವತ ಅಲ್ಲ. ನಾವು ಮಾಡಿರುವ ಕಾರ್ಯಗಳೇ ಶಾಶ್ವತ. ನಾನು ಕೆಲಸ ಮಾಡಿದ ಕಾರಣಕ್ಕೆ ಆರಿಸಿ ತಂದಿದ್ದೀರಿ ಎಂದು ಮತದಾರರಿಗೆ ಅಭಿನಂದನೆ ಹೇಳಿದರು.
ಬಿಜೆಪಿ ವಿರುದ್ಧ ವಿನಯ ಕುಲಕರ್ಣಿ ಗರಂ: ''ಈಗ ಗೆದ್ದರೂ ಇನ್ನೂ 9 ತಿಂಗಳು ನಾವು ಕೆಲಸ ಮಾಡಬೇಕಿದೆ. ಗ್ರಾಪಂ, ತಾಪಂ, ಜಿಪಂಗಳಲ್ಲಿಯೂ ನಮ್ಮದೇ ಗೆಲುವು ಆಗಬೇಕು. ಮುಂದೆ ಬರುವ ಚುನಾವಣೆಗಳಲ್ಲಿ ನಮ್ಮದೇ ಗೆಲುವು ಆಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಇನ್ನೊಂದು ಎರಡ್ಮೂರು ತಿಂಗಳು ಜನರ ಕೆಲಸ ಮಾಡಲು ತೊಂದರೆ ಆಗುತ್ತದೆ. ಈ ಗ್ಯಾರಂಟಿಗಳದ್ದು ಮುಗಿಯಲಿ ಆ ಬಳಿಕ ಎಲ್ಲ ಕೆಲಸ ಮಾಡುತ್ತೇವೆ. ವಿನಯ ಕುಲಕರ್ಣಿ ಎಂಥಾವ ಅದಾನು ಅಂತಾ ನ್ಯಾಷನಲ್ ಮೀಡಿಯಾಗಳು ಕೇಳುವಂತಾಗಿವೆ. ದೆಹಲಿಯಲ್ಲಿಯಿಂದ ಮಾಧ್ಯಮಗಳು ಬಂದು ನಮ್ಮ ಸುದ್ದಿ ಮಾಡಿವೆ. ದೇಶದಲ್ಲೇ ನಮ್ಮ ಕ್ಷೇತ್ರದ ಚುನಾವಣೆ ಇತಿಹಾಸ ನಿರ್ಮಾಣ ಮಾಡಿದೆ. ಕ್ಷೇತ್ರದ ಹೊರಗಿದ್ದು, ಗೆದ್ದಿದ್ದು ಇತಿಹಾಸ ಆಗಿದೆ'' ಎಂದರು. ನನ್ನಂತಹ ಅನೇಕರಿಗೆ ಬಿಜೆಪಿಯವರು ತೊಂದರೆ ಕೊಟ್ಟಿದ್ದಾರೆ. ನಾನು ಹೆದರಿ ಬಿಜೆಪಿಗೆ ಸೇರಿದ್ರೆ ನನ್ನ ಮೇಲೆ ಯಾವುದೇ ಕೇಸ್ ಇರ್ತಾ ಇರಲಿಲ್ಲ. ಬಿಜೆಪಿಯಲ್ಲಿ ಇದ್ದಿದ್ದರೆ ನನ್ನ ಮೇಲೆ ಯಾವುದೇ ಕೇಸ್ ಇರುತ್ತಿರಲಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಎಂಪಿ ಎಲೆಕ್ಷನ್ವರೆಗೂ ಕಾದು ನೋಡೋಣ.. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ: ಸತೀಶ್ ಜಾರಕಿಹೊಳಿ