ಧಾರವಾಡ: ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ ತಪ್ಪು ಮಾಡಬಾರದು. ಇಂಥದ್ದೊಂದು ಜವಾಬ್ದಾರಿ ದೊರೆತಾಗ ಜಾಗರೂಕತೆ ಇರಬೇಕು. ತಪ್ಪುಗಳಾಗಿದ್ದರೆ ಮರುಪರಿಷ್ಕರಣೆ ಮಾಡಿ ಸರಿಪಡಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಇಲ್ಲಿನ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಬಸವಣ್ಣನ ಪಠ್ಯದಲ್ಲಿ ಹಲವು ಹೊಸ ವಿಚಾರಗಳ ಹಿನ್ನೆಲೆಯಲ್ಲಿ ಲೋಪದೋಷಗಳನ್ನು ಯಾರೇ ಕಂಡುಹಿಡಿದರೂ ಸರಿ ಮಾಡುತ್ತೇವೆ. ಯಾವುದೇ ತಪ್ಪನ್ನು ಮುಚ್ಚಿಡುತ್ತಿಲ್ಲ. ವಾದ-ವಿವಾದ ಮಕ್ಕಳ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದರು.
ಶೇ.84ರಷ್ಟು ಪುಸ್ತಕಗಳು ಬಿಇಒ ಕಚೇರಿ ಸೇರಿವೆ. ಇನ್ನೊಂದು ತಿಂಗಳಲ್ಲಿ ಎಲ್ಲ ಪುಸ್ತಕಗಳು ಎಲ್ಲರ ಕೈ ಸೇರುತ್ತವೆ. ಈ ಸಾರಿ ಅತಿಥಿ ಶಿಕ್ಷಕರನ್ನು ಶಿಕ್ಷಕರನ್ನಾಗಿ ತೆಗೆದುಕೊಳ್ಳುತ್ತಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಸೈಕಲ್ ವಿತರಣೆ ಸಹ ಮಾಡಲಿದ್ದೇವೆ. ಸಾಹಿತಿಗಳನ್ನು ಕಡೆಗಣಿಸಿಲ್ಲ. ಮಹಾರಾಜರನ್ನು ತೆಗೆದು ಟಿಪ್ಪು ಸುಲ್ತಾನ್ನನ್ನು ತರಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತುಹಾಕಿ ನೆಹರೂ ಪಾಠ ತರಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪುಸ್ತಕದಲ್ಲಿ ತರಲಾಗಿತ್ತು. ಇಂತಹ 100 ಉದಾಹರಣೆಗಳಿವೆ ಎಂದರು.