ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ಖಂಡಿಸಿ ವಾಣಿಜ್ಯೋದ್ಯಮಿಗಳು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಈ ಬಂದ್‌ಗೆ ಕರೆ ನೀಡಿತ್ತು. ಧಾರವಾಡ ಜಿಲ್ಲೆಯ ಬಹುತೇಕ ಉದ್ಯಮ ಇಂದು ಸ್ಥಬ್ಧವಾಗಲಿದ್ದು, ಕೈಗಾರಿಕೆ, ಟ್ರಾನ್ಸ್ ಪೋರ್ಟ್, ಅಟೋಮೊಬೈಲ್, ಜವಳಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ಸ್ಥಗಿತವಾಗಲಿವೆ.
ಬೆಳಗ್ಗೆ 10 ಗಂಟೆಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಚೇರಿಯಿಂದ ತಹಶೀಲ್ ಕಚೇರಿವರೆಗೂ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ. ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಕೂಡ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇಂದಿನ ಬಂದ್‌ಗೆ ಬೆಂಬಲ ಸೂಚಿಸದ ಹೋಟೆಲ್ ಮೈಸೂರು ಮಾಲೀಕರ ಸಂಘ: ಹುಬ್ಬಳ್ಳಿಯ ಕರ್ನಾಟಕ ಚೇಂಬರ್ಸ್ ಆ ಕಾಮರ್ಸ್ ಮತ್ತು ಇಂಡಸ್ಟ್ರೀಸ್ರವರ ನೇತೃತ್ವದ ಎಂಸಿಸಿಐ ಸಹಯೋಗದಲ್ಲಿ ವಿವಿಧ ಸಂಘಟನೆಗಳು ಜೂ.22 ರಂದು(ಇಂದು) ಕರ್ನಾಟಕ ಬಂದ್ ನಡೆಸಬೇಕೆಂದು ಮನವಿ ಮಾಡಿರುವ ಹಿನ್ನೆಲೆಗೆ ಸಂಬಂಧಿಸಿದಂತೆ ಮೈಸೂರು ಹೋಟೆಲ್ ಮಾಲೀಕರ ಸಂಘವು 'ಭಾರತ್ ಬಂದ್ ಆಗಲೀ, ಕರ್ನಾಟಕ ಬಂದ್ ಆಗಲೀ ಯಾವುದೇ ಬಂದಿಗೂ ನಮ್ಮ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಕನ್ನಡಪರ ಹೋರಾಟಗಳಿಗೆ, ಕನ್ನಡದ ಏಳಿಗೆಗೆ ನಮ್ಮ ಸಹಕಾರ ಇದೆ. ಈ ನಾಡಿನ ಗಡಿ, ನೆಲ, ಜಲ, ಭಾಷೆಯ ವಿಚಾರ ಬಂದಾಗ ನಾವು ಮುಂಚೂಣಿಯಲ್ಲಿ ಹೋರಾಡಿದ್ದೇವೆ, ಹೋರಾಡುತ್ತೇವೆ. ಆದರೆ ಬಂದ್ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ಬ್ರಿಟಿಷರನ್ನು ಭಾರತದಿಂದ ಓಡಿಸಲು ಆರಂಭಿಸಿದ ಈ ಸಂಸ್ಕೃತಿಯನ್ನು ಮುಂದುವರಿಸಲು ನಮ್ಮ ಬೆಂಬಲ ಇಲ್ಲ. ಇದರಿಂದಾಗಿ ಹೋಟೆಲ್ ಉದ್ಯಮ ವ್ಯಾಪಾರಿಗಳಿಗೆ, ದಿನದ ದುಡಿಮೆ ನಂಬಿಕೊಂಡು ಬದುಕುತ್ತಿರುವ ಮತ್ತು ಅನೇಕ ಶ್ರಮಿಕ ವರ್ಗದವರಿಗೆ ಎಷ್ಟು ನಷ್ಟವಾಗುತ್ತದೆ. ಆರ್ಥಿಕತೆಗೆ ಎಷ್ಟು ಹೊಡೆತ ಬೀಳುತ್ತದೆ ಎಂಬುದನ್ನು ಹೋರಾಟಗಾರರು ಬಂದ್‌ಗೆ ಕರೆ ಕೊಡುವವರು ತಿಳಿಯಬೇಕು.
ಹೋರಾಡಲು ಬಂದ್ ಮಾತ್ರವಲ್ಲದೇ ಬೇರೆ ದಾರಿಗಳಿವೆ. ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ತೊಂದರೆ ಕೊಡುವ ಬಂದ್ ಸಂಸ್ಕೃತಿಯನ್ನು ಕೈಬಿಡಿ, ಯಾವುದೇ ಪಕ್ಷ, ಸಂಘಟನೆಗಳು ಹೋರಾಟ ಮಾಡಬೇಕೆಂದರೂ ಬೇರೆ ರೀತಿಯಲ್ಲಿ ಮಾಡಿ, ಜನರಿಗೆ ತೊಂದರೆ ಕೊಡುವ ಬಂದ್‌ಗಳಿಗೆ ಈಗಲೂ, ಇನ್ನು ಮುಂದೆಯೂ ನಮ್ಮ ಬೆಂಬಲ ಖಡಾ ಖಂಡಿತವಾಗಿಯೂ ಇಲ್ಲ.
ಆದರೆ, ವಿದ್ಯುತ್ ಏರಿಕೆ ದರವನ್ನು ಮುಖ್ಯಮಂತ್ರಿಗಳು ಹಿಂಪಡೆಯುವವರೆಗೆ ಹೋರಾಟ ಇದ್ದೇ ಇದೆ. ನಮಗೆ ನಾವೇ ಬಂದ್ ಮಾಡಿಕೊಂಡು ಹೆಚ್ಚುವರಿ ವಿದ್ಯುತ್ ದರ ಹೊರೆಯ ಜೊತೆಗೆ ಇನ್ನೂ ಹೆಚ್ಚಿನ ನಷ್ಟಮಾಡಿಕೊಳ್ಳಲು ನಮ್ಮ ಉದ್ಯಮ ತಯಾರಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲು ಇಚ್ಚಿಸುತ್ತೇವೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯ ಬಂದ್‌ಗೆ ಹಾವೇರಿ ಚೇಂಬರ್ ಆಫ್ ಕಾಮರ್ಸ್ ಬೆಂಬಲ