ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವದ ಕಳಸಾ-ಬಂಡೂರಿ ನಾಲಾ ಯೋಜನೆ ಕುರಿತು ಸರ್ಕಾರ ಜನರ ದಾರಿತಪ್ಪಿಸುವ ಬದಲು ಯೋಜನೆ ಮುಕ್ತಾಯ ದಿನಾಂಕವನ್ನು ರಾಜ್ಯದ ಜನರಿಗೆ ತಿಳಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಪಶ್ಚಿಮ ಪದವೀಧರ ಮತಕ್ಷೇತ್ರದ ಸಂಯೋಜಕ ವಿಕಾಸ ಸೊಪ್ಪಿನ ಒತ್ತಾಯಿಸಿದರು.
ನಗರದಲ್ಲಿಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳಸಾ ಬಂಡೂರಿ ನಾಲಾ ಯೋಜನೆ ಉತ್ತರ ಕರ್ನಾಟಕದ ಬಹುಮುಖ್ಯ ಬೇಡಿಕೆ ಆಗಿದೆ. ಇದಕ್ಕಾಗಿ ಹಲವಾರು ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ. ಆದರೂ ಸಹ ಸರ್ಕಾರ ಮಾತ್ರ ಯೋಜನೆ ಕುರಿತು ವಾಸ್ತವದ ಪರಿಸ್ಥಿತಿಯನ್ನು ಜನರಿಗೆ ತಿಳಿಸುತ್ತಿಲ್ಲ. ಮತ್ತೆ ಮತ್ತೆ ಆಡಳಿತಾತ್ಮಕ ಅನುಮೋದನೆಯನ್ನಷ್ಟೇ ಪಡೆದು ಯೋಜನೆ ಸಂಪೂರ್ಣಗೊಂಡಿತು ಎಂಬ ರೀತಿ ಬಿಂಬಿಸುತ್ತಿದ್ದಾರೆ. ಕೇಂದ್ರದಿಂದ ಗೆಜೆಟ್ ಜೊತೆಗೆ ಡಿಪಿಆರ್ ಮಾಡದೇ 2000 ನೇ ಇಸ್ವಿಯಲ್ಲಿ ಪಡೆದ ಆಡಳಿತಾತ್ಮಕ ಅನುಮೋದನೆಯಂತೆ ಇಂದು ಕೂಡಾ ಮಾಡಿದ್ದು, ಅದನ್ನೇ ಯೋಜನೆ ಪೂರ್ಣಗೊಂಡಂತೆ ಬಿಂಬಿಸುವ ಯತ್ನ ನಡೆದಿದೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ಯೋಜನೆ ಕುರಿತು ಕೇಂದ್ರದಿಂದ ಡಿಪಿಆರ್ ಪಡೆದು ಯೋಜನೆ ಆರಂಭಿಸಿ ಜನರಿಗೆ ಸ್ಪಷ್ಟವಾಗಿ ಮುಕ್ತಾಯದ ದಿನಾಂಕವನ್ನು ಹೇಳಬೇಕೆಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಶಿವಲಿಂಗಪ್ಪ, ಶಶಿಕುಮಾರ್ ಸುಳ್ಳದ ಇದ್ದರು.