ಹುಬ್ಬಳ್ಳಿ: ಸಾಮಾನ್ಯವಾಗಿ ಬಸ್ ಎಂದರೆ ಸೀಟುಗಳು, ಅಲ್ಲಲ್ಲಿ ಬೋರ್ಡ್ಗಳು, ಅಲ್ಲದೆ, ಕೆಲವು ಭಿತ್ತಿ ಚಿತ್ರಗಳನ್ನು ನಾವು ನೋಡಬಹುದು. ಆದರೆ, ಕನ್ನಡ ರಾಜ್ಯೋತ್ಸವ ಹಿನ್ನೆಲೆ ನಗರದ ಸರ್ಕಾರಿ ಬಸ್ಸುಗಳು ಕನ್ನಡದ ಕಂಪನ್ನ ಬೀರುವ ದೃಶ್ಯಗಳು ಕನ್ನಡಿಗರ ಮನ ತಣಿಸಿದೆ.
ಬನ್ರೀ, ನಮ್ಮ ಸಂಗಡ ಎನ್ನುತಾ ನಗರದ ಗ್ರಾಮೀಣ ಸಾರಿಗೆ, ನಗರ ಸಾರಿಗೆಯ ಕೆಲವು ನಿರ್ವಾಹಕರು ಮತ್ತು ಸಿಬ್ಬಂದಿ, ಕನ್ನಡ ಸಾರಿಗೆಯ ತೇರು ಎಳೆಯುತ್ತಾ ಪ್ರಯಾಣಿಕರಿಗೆ ಕನ್ನಡದ ಸೊಬಗನ್ನ ಉಣ ಬಡಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆ ಗ್ರಾಮೀಣ ಘಟಕ 2ರ ಸಾರಿಗೆ ಘಟಕದ ಕಂಡಕ್ಟರ್ ಶಶಿಕುಮಾರ್ ಹಾಗೂ ಡ್ರೈವರ್ ಇವರೇ ಬಸ್ಸನ್ನು ಕನ್ನಡದ ತೇರಾಗಿ ಮಾರ್ಪಡಿಸಿದ್ದಾರೆ. ಬಸ್ಸಿನ ಹೊರಗಡೆ ಮತ್ತು ಒಳಗಡೆ ಕವಿ, ಸಾಹಿತಿ, ಶರಣ ಸಂತರ, ದಾರ್ಶನಿಕರು ಮತ್ತು ಹೋರಾಟಗಾರರ ಹಾಗೂ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗ ಅಂಟಿಸಿದ್ದಾರೆ. ಅಲ್ಲದೆ ಎಲ್ಲಾ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಬರೆದಿದ್ದು, ಪ್ರಯಾಣಿಕರಿಗೆ ಉತ್ತಮ ಮಾಹಿತಿ ನೀಡುತ್ತಿದ್ದಾರೆ. ಸಾರಿಗೆ ಸಂಸ್ಥೆಯವರು ಬರೆದ ಕನ್ನಡದ ನುಡಿಮುತ್ತುಗಳು, ಕವಿ ಕುವೆಂಪುರವರ 'ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು' ಅನ್ನೋ ಬರಹದ ಜತೆಗೆ ಅನೇಕ ಬರಹಗಳನ್ನ ಬರೆಸಿದ್ದಾರೆ.
ಕನ್ನಡನಾಡಿಗಾಗಿ ಶ್ರಮಿಸಿದ ಅನೇಕ ಮಹನೀಯರನ್ನು ಪರಿಚಯಿಸಿ ಕನ್ನಡಾಭಿಮಾನ ಮೆರೆದಿದ್ದಾರೆ.