ಹುಬ್ಬಳ್ಳಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಬೆಂಗಳೂರಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸುತ್ತೇನೆ. ಅಂತಿಮ ನಿರ್ಧಾರವನ್ನು ಅಲ್ಲಿಯೇ ಹೇಳುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಇದ್ದುಕೊಂಡೇ ಬಂಡಾಯವಾಗಿ ಸ್ಪರ್ಧೆ ಮಾಡಲಾಗದು. ಅದಕ್ಕೆ ಕಾನೂನು ತೊಡಕಿದೆ. ನನ್ನನ್ನು ಈಗಾಗಲೇ ಸಂಘದ ಹಲವರು ಸಂಪರ್ಕ ಮಾಡಿದ್ದಾರೆ. ನನ್ನ ಪರಿಸ್ಥಿತಿಯೀಗ ಸಣ್ಣ ಸ್ಥಾನಕ್ಕಾಗಿ, ಟಿಕೆಟ್‌ಗಾಗಿ ಫೈಟ್ ಮಾಡುವಂತಾಗಿದೆ. ಪಕ್ಷದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದೇನೆ. ವಿವಿಧ ಸಂದರ್ಭಗಳಲ್ಲಿ ಸಿಕ್ಕ ಅವಕಾಶಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಚಿರಋಣಿ. ಪಕ್ಷ ಕೊಟ್ಟ ಅಧಿಕಾರಕ್ಕಾಗಿ, ನಾನೂ ಪಕ್ಕಕ್ಕಾಗಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪನವರಿಗೂ ಪಕ್ಷ ಸರಿಯಾದ ಸ್ಥಾನಮಾನ ಕೊಟ್ಟಿತ್ತು. 2012 ರಲ್ಲಿ ಯಡಿಯೂರಪ್ಪನವರು ಕೆಜೆಪಿ ಪಕ್ಷ ಕಟ್ಟಿದ್ದೇಕೆ? ನನಗೆ ಈಗ ಅಪಮಾನ ಆಗಿದೆ ಎಂದು ಹೇಳಿದರು.
ಪ್ರಹ್ಲಾದ್ ಜೋಶಿ ಅವರು ಪಕ್ಷದ ಮುಖಂಡರಿಗೆ ಖಡಕ್ ವಾರ್ನಿಂಗ್ ನೀಡಿದ ಬಗ್ಗೆ ಮಾತನಾಡಿದ ಅವರು, ಮಾನಸಿಕವಾಗಿ ಯಾರನ್ನೂ ಹಿಡಿದುಕೊಳ್ಳಲು ಆಗುವುದಿಲ್ಲ. ಮಹಾನಗರ ಪಾಲಿಕೆ ಸದಸ್ಯರು ಮತ್ತು ಪದಾಧಿಕಾರಿಗಳು ನಾನು ಬೆಳೆಸಿದ ಹುಡುಗರು. ದೈಹಿಕವಾಗಿ ಅವರನ್ನು ಕಟ್ಟಿ ಹಾಕಲಾಗಿದೆ, ಮಾನಸಿಕವಾಗಿ ಅಲ್ಲ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೆಂಗಳೂರನಲ್ಲಿ ನಿರ್ಧಾರ ಮಾಡುತ್ತೇನೆ. ಮೊದಲು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.
ಹೈಕಮಾಂಡ್ ಸಲಹೆಗೆ ನಾನು ಒಪ್ಪಿಲ್ಲ: ಕಾಂಗ್ರೆಸ್ ನಾಯಕರು ಹೆಲಿಕಾಪ್ಟರ್ ಕಳಿಸಿಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಬೀಗರು ಕಳಿಸಿಕೊಟ್ಟ ಹೆಲಿಕಾಪ್ಟರ್ನಲ್ಲಿ ಹೋಗ್ತೇನೆ ಎಂದರು. ಇದೇ ವೇಳೆ, ಬಿಜೆಪಿಯಿಂದ ನನಗೆ ರಾಜ್ಯಸಭಾ ಸದಸ್ಯ ಸ್ಥಾನದ ಆಫರ್ ಕೊಟ್ಟಿದ್ದರು. ಹೈಕಮಾಂಡ್ ಸಲಹೆಗೆ ನಾನು ಒಪ್ಪಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : 'ನಮ್ಮ ಮನೆಯಿಂದಲೇ ನಮ್ಮನ್ನು ಹೊರಹಾಕಿದಂತಾಯಿತು'.. ರಾಜೀನಾಮೆ ಬಳಿಕ ಶೆಟ್ಟರ್ ಹೀಗಂದ್ರು