ಹುಬ್ಬಳ್ಳಿ : ಕಾಂಗ್ರೆಸ್ ನಾಯಕರಿಗೆ ಹಿಂದೂ ಪದವೇ ಅಲರ್ಜಿಯಾಗಿದೆ. ಚುನಾವಣೆ ಹತ್ತಿರ ಬಂದಾಗ ಚರ್ಚೆ ಆಗದ ವಿಷಯಗಳನ್ನು ತಂದಿರುವುದೇ ಅವರ ಅಜ್ಞಾನವನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದೂ ಪದದ ಕುರಿತು ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹರಿಹಾಯ್ದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಪರಂಪರೆ, ಸಂಸ್ಕೃತಿಯನ್ನು ಟೀಕಿಸಿದಾಗಲೇ ಸಮಾಧಾನ ಆಗುತ್ತದೆ. ಹಿಂದೂಗಳ ವಿರೋಧಿ ಎಂದು ತೋರಿಸಿಕೊಂಡು ಅಲ್ಪಸಂಖ್ಯಾತರನ್ನು ಓಲೈಸಿ ಅವರ ಮತಗಳನ್ನು ಸೆಳೆಯುವ ಸಲುವಾಗಿ ಈ ತರಹದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಗೆ ತಾವು ಕೂಡ ಹಿಂದೂ ಎಂಬ ವಿಷಯ ನೆನಪಿಗೆ ಬಂದಿದೆ. ಹಿಂದೂಗಳ ಮತಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಜನಿವಾರ ತೋರಿಸಿ ನಾನು ಹಿಂದೂ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಹಿಂದೂ ಪದದ ಬಗ್ಗೆ ಚರ್ಚೆ ಮಾಡುವುದೇ ಅನಾವಶ್ಯಕ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಇದು ಸರಿಯಲ್ಲ ಎಂದರು.
ಒಂದು ವೇಳೆ ಸತೀಶ್ ಜಾರಕಿಹೊಳಿ ಹಿಂದೂ ಬಗ್ಗೆ ಹೇಳಿಕೆ ನೀಡಿರುವುದು ವೈಯಕ್ತಿಕವಾಗಿದ್ದರೇ, ಅವರನ್ನು ಪಕ್ಷದಿಂದ ತೆಗೆದು ಹಾಕುತ್ತಾರೆಯೇ? ಎಂದು ಪ್ರಶ್ನಿಸಿದರು. ಜಾರಕಿಹೊಳಿ ಒಬ್ಬ ಕಾರ್ಯಕರ್ತರಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. ಇದೆಲ್ಲ ಅಲ್ಪಸಂಖ್ಯಾತರನ್ನು ಓಲೈಸುವ ಹುನ್ನಾರ. ಇದರಿಂದ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಅದೋಗತಿಗೆ ಹೋಗುತ್ತಿದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.
ಸಚಿವ ಭೈರತಿ ಬಸವರಾಜ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪದ ಕುರಿತು ಮಾತನಾಡಿದ ಪ್ರತಿಕ್ರಿಯಿಸಿದ ಅವರು, ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮ ಆಗಬೇಕು. ಇದೀಗ ಲಂಚದ ಆರೋಪ ಬಂದಾಗ ಲೋಕಾಯುಕ್ತಕ್ಕೆ ದೂರು ಕೊಡಲಿ, ತನಿಖೆ ಆಗಲಿ, ಕೇವಲ ಹಿಟ್ ಆ್ಯಂಡ್ ರನ್ ಆಗಬಾರದು ಎಂದರು.
ಇದನ್ನೂ ಓದಿ:ನನ್ನ ಹೇಳಿಕೆ ತಪ್ಪು ಅಂತಾ ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಸಿದ್ಧ: ಬಿಜೆಪಿಗೆ ಸತೀಶ್ ಜಾರಕಿಹೊಳಿ ಸವಾಲು