ಹುಬ್ಬಳ್ಳಿ: ರಾಜ್ಯದ ಜನರ ಮೇಲಿನ ಹೊರೆ ಕಡಿಮೆ ಮಾಡುವ ದೃಷ್ಟಿಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ 7 ರೂ. ಸೆಸ್ ಅನ್ನು ಕಡಿಮೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಈ ಕುರಿತು ನಗರದಲ್ಲಿಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗ ಮತ್ತು ಬಡವರಿಗೂ ಸಾಕಷ್ಟು ತೊಂದರೆಯಾಗಿತ್ತು. ಹೀಗಾಗಿ, ಬೆಲೆ ಇಳಿಕೆ ಮಾಡಬೇಕೆಂದು ಜನರು ಬೇಡಿಕೆ ಇಟ್ಟಿದ್ದರು. ಅದರಂತೆ ಪ್ರತಿ ಲೀಟರ್ ಪೆಟ್ರೋಲ್ಗೆ 5 ರೂ. ಹಾಗೂ ಡಿಸೇಲ್ಗೆ 10 ರೂಪಾಯಿ ಇಳಿಕೆ ಮಾಡುವ ಮೂಲಕ ದೇಶದ ಪ್ರಧಾನಿ ಜನರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ ಎಂದರು.
ಸೆಸ್ ಬೆಲೆ ಇಳಿಕೆ ಕಡಿಮೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ, ಇದರಿಂದ ಸರ್ಕಾರಕ್ಕೆ ಲಕ್ಷಾಂತರ ಕೋಟಿ ಆದಾಯ ನಷ್ಟವಾಗಿದೆ. ಆದರೆ, ಜನರಿಗೆ ಬಾರವಾಗಬಾರದೆಂಬ ದೃಷ್ಟಿಯಿಂದ ಟ್ಯಾಕ್ಸ್ ಕಡಿಮೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ನಾಗರಿಕರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ನೂರು ದಿನ ಪೂರೈಕೆ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡಾ ಸ್ವಾಗತ ಮಾಡುತ್ತೇನೆ. ಬಹಳಷ್ಟು ನಾಯಕತ್ವ ಬದಲಾವಣೆ ಮಾತುಗಳ ನಡುವೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರಳವಾಗಿ ಸಾಂಗವಾಗಿ ಆಡಳಿತ ನಡೆಯುತ್ತಿದೆ. ಇದು ಹೀಗೆಯೇ ಮುನ್ನೆಡೆಯಲಿ ಎಂದು ಆಶಿಸಿದರು.
ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ನ್ಯಾಯಾಂಗ ತನಿಖೆ ಆದೇಶಕ್ಕೆ ಒತ್ತಾಯಿಸಿದ ಕುರಿತು ಮಾತನಾಡಿ, ಬಿಟ್ ಕಾಯಿನ್ ವಿಚಾರವನ್ನು ಈಗಾಗಲೇ ಇಡಿ ಮತ್ತು ಸಿಬಿಐಗೆ ಕೊಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಮಾಡಿದೆ. ಸುಮ್ಮನೆ ಊಹಾಪೋಹಗಳ ಮೇಲೆ ಸಿದ್ದರಾಮಯ್ಯ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಅವರ ಕಡೆ ಇರುವ ಸಾಕ್ಷ್ಯವನ್ನು ಬೆಳಕಿಗೆ ತರಲಿ ಎಂದರು.
ಓದಿ: ದೀಪಾವಳಿ ಸಂಭ್ರಮ: ಮೈಸೂರಿನಲ್ಲಿ ಹಸಿರು ಪಟಾಕಿಗೆ ಮುಗಿಬಿದ್ದ ಜನ, ಭರ್ಜರಿ ವ್ಯಾಪಾರ