ಹುಬ್ಬಳ್ಳಿ : ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಪಕ್ಷ ಬಿಟ್ಟು ಹೋಗುತ್ತಿರುವವರನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಹೀಗಾಗಿ ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂಬುದು ಸುಳ್ಳು ಸುದ್ದಿ ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಮತ್ತೆ ಬಿಜೆಪಿಗೆ ಸೇರುತ್ತಾರೆಯೇ ಎಂಬ ಪ್ರಶ್ನೆ ಪ್ರತಿಕ್ರಿಯೆ ನೀಡಿದ ಅವರು ಚುನಾವಣಾ ಸಂದರ್ಭದಲ್ಲಿ ಇನ್ನೂ ಏನೇನ್ ಆಗುತ್ತೋ ಕಾದು ನೋಡಿ. ಇವತ್ತು ಬಿಜೆಪಿಯ ಮಾಜಿ ಸಚಿವರು, ನಾಯಕರು ನನ್ನ ಮೂಲಕ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರೇ ಬಿಜೆಪಿಗೆ ಬರುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಯಾರು ಪಕ್ಷ ತೊರೆಯದಂತೆ ಕಡಿವಾಣ ಹಾಕುತ್ತಿದ್ದಾರೆ ಎಂದರು.
ಜಾತಿ ಗಣತಿ ವಿಚಾರ ಕುರಿತಂತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾತಿಗಣತಿ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಬೇಕು. ಅದರಲ್ಲಿ ಇರುವ ನ್ಯೂನತೆ ಹೊರ ಹಾಕುವ ಪ್ರಯತ್ನ ಮಾಡಬೇಕು. ಎಲ್ಲಾ ವರ್ಗದ ಪ್ರಮುಖರನ್ನು ಕರೆತರುವ ಅವಶ್ಯಕತೆಯಿದೆ ಎಂದ ಶೆಟ್ಟರ್, ಮಂಡ್ಯದಲ್ಲಿ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಾಮಾಣಿಕವಾಗಿ ತನಿಖೆ ನಡೆಸಲಾಗುತ್ತಿದೆ. ಎಲ್ಲರ ಮೇಲೆ ಸೂಕ್ತ ಕ್ರಮವಾಗಲಿ ಎಂದು ತಿಳಿಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಹಿ ಮಾಡಿದ್ದು ದೊಡ್ಡ ಅಪರಾಧವಲ್ಲ. ರಾಜ್ಯ ಬಿಜೆಪಿ ರಿಪೇರಿ ಮಾಡಲಾಗದಷ್ಟು ಪರಿಸ್ಥಿತಿ ದುಸ್ಥಿತಿ ತಲುಪಿದೆ. ಹೀಗಾಗಿ ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರಾದರೂ ಕೂಡ ರಿಪೇರಿ ಮಾಡಲಾಗದು ಎಂದ ಅವರು ಅರವಿಂದ್ ಲಿಂಬಾವಳಿ, ಸೋಮಣ್ಣ ಸೇರಿದಂತೆ ಹಲವರು ಅಸಮಾಧಾನದ ಧ್ವನಿ ಎತ್ತಿದ್ದಾರೆ. ಧ್ವನಿ ಎತ್ತಿದವರ ಮನೆಗೆ ಹೋಗಿ ಬಂದರೇ ಎಲ್ಲಾ ಸರಿ ಆಗೋಲ್ಲ. ಈಗಾಗಲೇ ಬಿಜೆಪಿ ಕಾರ್ಯಕರ್ತರು ನನ್ನ ಬಳಿ ನಮ್ಮದು ಲೀಡರ್ ಲೆಸ್ ಪಾರ್ಟಿ ಅಂತ ಅಳಲು ತೋಡಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಬಿಜೆಪಿ ಇಡಿ ಮತ್ತು ಐಟಿ ಮೂಲಕ ರಾಜಕೀಯ ಮಾಡುತ್ತಿದೆ. ವಿಪಕ್ಷಗಳು ಇರಲೇ ಬಾರದು ಎನ್ನುವುದು ಬಿಜೆಪಿ ಚಿಂತನೆಯಾಗಿದ್ದು, ಇದೀಗ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ ಎಂದು ಶೆಟ್ಟರ್ ಆರೋಪಿಸಿದರು.
ತೆಲಂಗಾಣ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿದ ಬಗ್ಗೆ ನೋಟಿಸ್ ನೀಡಲಾಗಿದೆ. ಕಾಂಗ್ರೆಸ್ ತನ್ನ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಿದೆ, ಇದರಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಅಂತ ತೆಲಂಗಾಣ ರಾಜ್ಯ ಸರ್ಕಾರ ನೋಟಿಸ್ ನೀಡುವ ಅಗತ್ಯವಿಲ್ಲ. ಇದನ್ನು ಚುನಾವಣಾ ಆಯೋಗ ಗಮನಿಸಬೇಕೆಂದು ಹೇಳಿದರು.
ಇದನ್ನೂ ಓದಿ : ಕರ್ನಾಟಕ ಸರ್ಕಾರದ ಗ್ಯಾರಂಟಿ ಸಾಧನೆಯನ್ನು ತೆಲಂಗಾಣದ ಪ್ರಚಾರದಲ್ಲಿ ಬಿಜೆಪಿ ತಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ