ಹುಬ್ಬಳ್ಳಿ: ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದವನ್ನು ಕೋರ್ಟ್ನಲ್ಲಿ ಬಗೆಹರಿಸುವುದಕ್ಕಿಂತ ನಾವೇ ಸರಿಪಡಿಸಿಕೊಳ್ಳುವುದು ಒಳ್ಳೆಯದು ಎಂದು ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿವಾದ ಮುಗಿಯುವವರೆಗೆ ನಾವು ಹಿಂದಕ್ಕೆ ಸರಿಯುವುದಿಲ್ಲ. ಇಡೀ ನಾಡಿಗೆ ಕೋರ್ಟ್ ಆಗಬೇಕಿದ್ದ ನಮ್ಮ ಮಠ, ಇಂದು ಕೋರ್ಟ್ನಲ್ಲಿ ವಿವಾದ ಇರುವುದರಿಂದ ಸಂಕಟ ಪಡುತ್ತಿದೆ. ನಾವು ಎಷ್ಟೋ ಸಾರಿ ಖಾಸಗಿ ವಿಷಯಗಳನ್ನು ಮಠದಲ್ಲೇ ಬಗೆಹರಿಸಿ ನ್ಯಾಯ ನೀಡಿದ್ದೇವೆ. ನಾನೇ ಪೀಠಾದಿಪತಿಯಾಗಬೇಕು ಎಂದು ನನ್ನ ಆಯ್ಕೆ ಸಭೆಯಲ್ಲಿ 52 ಜನರು ಸಹಿ ಮಾಡಿದ್ದಾರೆ. ಆದರೆ, ಅವರು ಹೀಗೇಕೆ ಹೇಳುತ್ತಿದ್ದಾರೆ ಎಂದು ನನಗೆ ತಿಳಿಯದಂತಾಗಿದೆ. ಸಭೆ ನಡೆಸಲು ಅವಕಾಶ ಕೊಡಲ್ಲ ಅನ್ನೋದಕ್ಕೆ ಇವರಾರು? ಯಾವ ಪ್ರತಿ ಇಲ್ಲದೇ ಬಂದು ಹೇಳಿಕೆ ನೀಡಿದರೆ ನಾನು ಅದಕ್ಕೆ ಬಗ್ಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಬಹುಮತ ಮತ್ತು ಸಹ ಮತದಿಂದ ಉತ್ತರಾಧಿಕಾರಿ ನೇಮಕ ಮಾಡಬೇಕು ಎನ್ನುವುದು ನಮ್ಮ ಆಶಯ. ಸಮಾಜಕ್ಕೆ ಸುಳ್ಳು ಕಥೆ ಹೇಳುವುದು ಬೇಡ. ನನ್ನ ಪ್ರಕಾರ ಗುರುಗಳನ್ನು ವ್ಯವಸ್ಥಿತವಾಗಿ ಬಂಧನದಲ್ಲಿ ಇಟ್ಟಿದ್ದಾರೆ ಎಂದರು. ಬಾಳೆ ಹೊಸೂರು ಸ್ವಾಮಿಗಳು ಬಂದ್ರೆ ಮೂರು ಸಾವಿರ ಮಠ ಬೆಳೆಯುತ್ತದೆ.ಇದನ್ನು ಕೆಲವರಿಗೆ ಸಹಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ಕೆಲವರು ವಿರೋಧಿಸುತ್ತಿದ್ದಾರೆ. ಸಭೆ ಹಿನ್ನೆಲೆ 144 ಸೆಕ್ಷನ್ ಜಾರಿ ಮಾಡುವುದು ಬೇಡ. ಪೊಲೀಸರು ಷರತ್ತು ಬದ್ದ ಅನುಮತಿ ನೀಡಬೇಕು. ಇಲ್ಲವಾದರೆ ಸತ್ಯವನ್ನು ಕೊಂದಂತಾಗುತ್ತದೆ ಎಂದು ದಿಂಗಾಲೇಶ್ವ ಸ್ವಾಮೀಜಿ ಹೇಳಿದ್ದಾರೆ.