ಹುಬ್ಬಳ್ಳಿ: ಉತ್ತರ ಕರ್ನಾಟಕ ಸೇರಿದಂತೆ ಹುಬ್ಬಳ್ಳಿ ನಗರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು. ಜೊತೆಗೆ ನಗರಗಳು ಅಭಿವೃದ್ಧಿಯಾಗಬೇಕು, ಈ ದಿಸೆಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ರು.
ನಗರದ ಖಾಸಗಿ ಹೊಟೇಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳೆಂದರೆ ಸಾಕು ಬೆಂಗಳೂರು, ಬೆಂಗಳೂರು ಸುತ್ತಮುತ್ತ ಎಂದು ಹೇಳಲಾಗುವುದು ಅದನ್ನು ತಡೆಯಬೇಕು. ಅಲ್ಲದೇ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಕಲಬುರಗಿ, ರಾಯಚೂರು ಸೇರಿದಂತೆ ಎಲ್ಲೆಡೆ ಕೈಗಾರಿಕೆಗಳು ಸ್ಥಾಪನೆ ಆಗಬೇಕು. ಈ ದಿಸೆಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ಕೊಡಲಾಗುವುದು. ಹಾಗಾಗಿ ಹೆಚ್ಚು ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಉದ್ಯಮ ಸ್ಥಾಪನೆಗೆ ಮುಂದಾಗಬೇಕು ಎಂದರು.
ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಜೊತೆಗೆ ಅಗತ್ಯ ಪರಿಸರವನ್ನು ನಿರ್ಮಾಣ ಮಾಡುವುದು. ಜೊತೆಗೆ ಹೂಡಿಕೆದಾರರಿಗೆ ಬೇಕಾಗುವ ಅಗತ್ಯ ಭೂಮಿ ಸೇರಿದಂತೆ ಕಚ್ಚಾ ವಸ್ತುಗಳು ತೊಂದರೆಯಾಗದಂತೆ ನೋಡಿಕೊಳ್ಳುವುದು ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು. ಈ ಹಿನ್ನಲೆಯಲ್ಲಿ ಅತಿ ಹೆಚ್ಚು ಹೂಡಿಕೆದಾರರು ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಭಾಗವಹಿಸಬೇಕೆಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೊಳನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕೈಗಾರಿಕೆ ಇಲಾಖೆ ಕಮೀಷನರ್ ಕುಂದನ್ ಕೃಷ್ಣನ್ ಸೇರಿದಂತೆ ಇನ್ನಿತರರು ಇದ್ದರು.