ಮುಂಬೈ: ಕರ್ನಾಟಕವನ್ನು ದೇಶದ ನಂಬರ್.1 ಉದ್ಯಮ ಹೂಡಿಕೆ ಸ್ನೇಹಿ ರಾಜ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
'ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020’ ಕುರಿತು ಮುಂಬೈನಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಉದ್ಯಮ ಹೂಡಿಕೆಗೆ ಪ್ರಶಸ್ತವಾದ ರಾಜ್ಯವಾಗಿದೆ. ಪ್ರಸ್ತುತ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದ್ದು, ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಇದಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಉದ್ಯಮಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೇ ಎರಡನೇ ಹಂತದ ನಗರಗಳಲ್ಲಿಯೂ ಬೆಳೆಯಬೇಕೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ನಗರಗಳಲ್ಲಿಯೂ ಉದ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸುತ್ತಿವೆ. ಇದೀಗ ಉತ್ತರ ಕರ್ನಾಟಕದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದ್ದು, ಇಲ್ಲಿ ಬಂಡವಾಳ ಹೂಡಿಕೆಗೆ ಎಲ್ಲಾ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಬಂಡವಾಳ ಆಕರ್ಷಣೆಗೆ ಮುಂಬೈನಲ್ಲಿ ರೋಡ್ ಶೋ ನಡೆಸುತ್ತಿದ್ದೇವೆ ಎಂದು ಹೇಳಿದರು.
ಇಂದು ಕರ್ನಾಟಕ 216 ಯುಎಸ್ ಬಿಲಿಯನ್ ಡಾಲರ್ನಷ್ಟು ಆರ್ಥಿಕತೆಯನ್ನು ಹೊಂದಿರುವ ರಾಜ್ಯವಾಗಿದ್ದು, ವಾರ್ಷಿಕ ಶೇ.9.6 ರಷ್ಟು ಪ್ರಗತಿ ಸಾಧಿಸುತ್ತಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಪಾದನಾ ವಾತಾವರಣವನ್ನು ಸೃಷ್ಟಿ ಮಾಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಇಕ್ವಿಪ್ಮೆಂಟ್, ಆಟೋ, ಆಟೋ ಬಿಡಿ ಭಾಗಗಳು & ಎಲೆಕ್ಟ್ರಿಕಲ್ ವಾಹನಗಳು ಸೇರಿದಂತೆ ಹಲವಾರು ಉದ್ದಿಮೆಗಳನ್ನು ಸ್ಥಾಪನೆ ಮಾಡಲು ಸರ್ಕಾರ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತಿವೆ ಎಂದರು.
ಈ ವೇಳೆ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ದೇಶಕ್ಕೆ ಹರಿದು ಬರುತ್ತಿರುವ ವಿದೇಶಿ ನೇರ ಬಂಡವಾಳದಲ್ಲಿ ರಾಜ್ಯಕ್ಕೆ 3ನೇ ಸ್ಥಾನವಿದೆ. ರಾಜ್ಯದ ವಾಣಿಜ್ಯ ನಗರವಾಗಿರುವ ಹುಬ್ಬಳ್ಳಿಯು ಉತ್ತರ ಕರ್ನಾಟಕ ಭಾಗದ ಕೈಗಾರಿಕೋದ್ಯಮ ತಾಣವಾಗಿದೆ. ಅಷ್ಟೇ ಅಲ್ಲದೆ, ಹುಬ್ಬಳ್ಳಿ-ಧಾರವಾಡದಲ್ಲಿ ಉದ್ದಿಮೆದಾರರು ಹೂಡಿಕೆ ಮಾಡಲು ಅನುಕೂಲವಾಗುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಒದಗಿಸಿಕೊಡಲಿದೆ ಎಂದು ಭರವಸೆ ನೀಡಿದರು.