ಹುಬ್ಬಳ್ಳಿ-ಧಾರವಾಡ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಕ್ರೀಡಾ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಅವಳಿ ನಗರದಲ್ಲಿ ಸಾಮೂಹಿಕ ಯೋಗಾಭ್ಯಾಸ ಮಾಡಲಾಯಿತು.
ಧಾರವಾಡದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸಸಿಗೆ ನೀರೆರೆಯುವ ಮೂಲಕ ಯೋಗಾಭ್ಯಾಸಕ್ಕೆ ಚಾಲನೆ ನೀಡಿದರು. ಯೋಗಾಭ್ಯಾಸದಲ್ಲಿ ಸಾವಿರಾರು ಜನ ಭಾಗವಹಿಸಿ ಯೋಗ ಮಾಡಿ ಸದೃಢ ದೇಹ ಹೊಂದುವಂತೆ ಕರೆ ನೀಡಿದರು.
ಕವಿವಿ ಯೋಗ ಶಿಕ್ಷಣ ವಿಭಾಗದ ವತಿಯಿಂದ ಕವಿವಿ ಆವರಣದಲ್ಲಿ ಸೇರಿಕೊಂಡು ಸಾಮೂಹಿಕ ಯೋಗ ಮಾಡಿ ಯೋಗದ ಮಹತ್ವ ಸಾರಿದರು. ಅಷ್ಟೇ ಅಲ್ಲದೇ ಧಾರವಾಡದ ಪ್ರಮುಖ ಸ್ಥಳಗಳಲ್ಲಿ ಸಾಮೂಹಿಕ ಯೋಗ ಮಾಡಲಾಗಿದೆ.
ಇನ್ನು ಹುಬ್ಬಳ್ಳಿಯಲ್ಲಿ ಶ್ರೀ ದುರ್ಗಾ ಡೆವೆಲಪರ್ಸ್ ಆ್ಯಂಡ್ ಪ್ರಮೋಟರ್ ಸಹಯೋಗದಲ್ಲಿ ಯೋಗಾಭ್ಯಾಸ ನಡೆಸಲಾಯಿತು. ನಗರದ ಜಿಮಖಾನಾ ಮೈದಾನದಲ್ಲಿ ಪತಂಜಲಿ ಯೋಗಪೀಠದ ಯೋಗಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನಲ್ಲಿ ಯೋಗಾಭ್ಯಾಸ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಯೋಗಾಸಕ್ತರು ಜಮಾಯಿಸಿದ್ದರು.
ಇನ್ನು ನಗರದ ಹೊಸೂರು ಬಳಿಯ ಹೊಸ ಕೋರ್ಟ್ ಆವರಣದಲ್ಲಿ ವಕೀಲರು ಕೂಡ ಸಾಮೂಹಿಕ ಯೋಗಾಸನ ಮಾಡಿದರು. ಇದಲ್ಲದೆ ನಗರದ ಇಂದಿರಾ ಗಾಂಧಿ ಗ್ಲಾಸ್ ಹೌಸ್ ಸೇರಿದಂತೆ ಹಲವು ಕಡೆ ಯೋಗಾಸನ ಹಮ್ಮಿಕೊಳ್ಳಲಾಗಿತ್ತು.