ಹುಬ್ಬಳ್ಳಿ: ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಚತುಷ್ಪಥ ರಸ್ತೆಯ ಫ್ಲೈ ಓವರ್ ನಿರ್ಮಾಣದ ನೀಲನಕ್ಷೆಯಲ್ಲಿ ಮಹಾನಗರಕ್ಕೆ ಕಳಶಪ್ರಾಯದಂತಿರುವ ಕಿತ್ತೂರು ರಾಣಿ ಚನ್ನಮ್ಮನ ಪುತ್ಥಳಿಯನ್ನು ಮೇಲಕ್ಕೇರಿಸದೆ ಅವಮಾನ ಮಾಡಲಾಗಿದೆ ಎಂದು ಧಾರವಾಡ ಮಹಾನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿ ಮಠ ಆರೋಪಿಸಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಚತುಷ್ಪಥ ಫ್ಲೈ ಓವರ್ ರಸ್ತೆ ನಿರ್ಮಾಣಕ್ಕೆ ನಾಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪೂಜೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ನಗರದ ತುಂಬೆಲ್ಲಾ ಬ್ಯಾನರ್ಗಳನ್ನು ಹಾಕಲಾಗಿದೆ. ಆದರೆ ರಸ್ತೆ ನಿರ್ಮಾಣಕ್ಕೆ ಮಾಡಲಾಗಿರುವ ನೀಲನಕ್ಷೆಯಲ್ಲಿ ಚನ್ನಮ್ಮನ ಪುತ್ಥಳಿ ರಸ್ತೆಗಿಂತ ಕೆಳಗೆ ಕಾಣಿಸುತ್ತಿದೆ. ಆದ್ದರಿಂದ ಚನ್ನಮ್ಮನ ಪುತ್ಥಳಿಯನ್ನು ಮೇಲಕ್ಕೇರಿಸಬೇಕು ಎಂದು ರಾಜಕೀಯ ಮುಖಂಡರಿಗೆ ಕೆಪಿಸಿಸಿ ಸಂಯೋಜಕ ರಜತ್ ಉಳ್ಳಾಗಡ್ಡಿಮಠ ಮನವಿ ಮಾಡಿದರು.
ಹುಬ್ಬಳ್ಳಿಯ ಅಭಿವೃದ್ಧಿಗೆ ನಾವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ಆದರೆ ಇಂತಹ ಮಹಾನ್ ನಾಯಕಿಗೆ ಅಗೌರವ ತೋರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.