ಹುಬ್ಬಳ್ಳಿ: ದಿನನಿತ್ಯ ಜಾತಿ-ಧರ್ಮದ ಹೆಸರಿನಲ್ಲಿ ಗದ್ದಲ ಹಾಗೂ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಹುಬ್ಬಳ್ಳಿಯ ಗೋಕುಲರಸ್ತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾಕೀರ್ ಪಾಷಾ ಕಾಲಿಮಿರ್ಚಿ ಎಂಬುವರು ಠಾಣೆಯಲ್ಲಿ ವಿಶಿಷ್ಟವಾಗಿ ಗಣೇಶೋತ್ಸವ ಆಚರಣೆ ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
![Install of Ganesha idol at Gokulroad Police Station](https://etvbharatimages.akamaized.net/etvbharat/prod-images/kn-hbl-05-gokul-station-ganesh-av-7208089_31082022152035_3108f_1661939435_334.png)
ಹೌದು, ರಾಜ್ಯ ಸೇರಿದಂತೆ ದೇಶದ ಕೆಲವೆಡೆ ಒಂದಿಲ್ಲೊಂದು ವಿಷಯಕ್ಕೆ ಕೋಮು ಭಾವನೆ ಕೆರಳಿಸುವ ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ, ಈ ಭಾವೈಕ್ಯತೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಹುಬ್ಬಳ್ಳಿಯ ಗೋಕುಲರಸ್ತೆಯ ಇನ್ಸ್ಪೆಕ್ಟರ್ ಜಾಕೀರ್ ಪಾಷಾ ಇದಕ್ಕೆ ಅಪವಾದವಾಗಿದ್ದಾರೆ. ಠಾಣೆಯ ಎಲ್ಲ ಸಿಬ್ಬಂದಿಯೊಂದಿಗೆ ಒಟ್ಟಿಗೆ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.
![Install of Ganesha idol at Gokulroad Police Station](https://etvbharatimages.akamaized.net/etvbharat/prod-images/kn-hbl-05-gokul-station-ganesh-av-7208089_31082022152035_3108f_1661939435_307.png)
ಗಣೇಶ ಹಬ್ಬದ ಮೊದಲ ದಿನ ಹಿಂದೂ ಸಂಸ್ಕೃತಿ ಬಿಂಬಿಸುವ ದಿರಿಸಿನಲ್ಲಿ ಕಂಡುಬಂದ ಇನ್ಸ್ಪೆಕ್ಟರ್ ಕಾಲಿಮಿರ್ಚಿ ಅವರು ತಲೆಗೆ ನೆಹರೂ ಟೋಪಿ ಧರಿಸಿ, ಹಣೆಗೆ ಕುಂಕುಮ ಬಳಿದುಕೊಂಡು ಉತ್ಸಾಹದಿಂದ ಗಣೇಶನನ್ನು ಕಚೇರಿಗೆ ಹೊತ್ತು ತಂದು ಪ್ರತಿಷ್ಠಾಪನೆ ಮಾಡಿದ್ದಲ್ಲದೇ ವಿಶೇಷವಾಗಿ ಪೂಜೆಯನ್ನು ಸಹ ಸಲ್ಲಿಸಿದ್ದಾರೆ. ಇದರ ಜೊತೆಗೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಸತ್ಯ ನಾರಾಯಣ ಪೂಜೆ ಮಾಡಿಸಿ ಭಕ್ತಿ ಮೆರೆದಿದ್ದಾರೆ.
ಸದಾ ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾದ ಗೋಕುಲರಸ್ತೆ ಠಾಣೆಯ ಇನ್ಸ್ಪೆಕ್ಟರ್ ಜಾಕೀರ್ ಪಾಷಾ ಕಾಲಿಮಿರ್ಚಿ ಅವರು ಇಂದು ತಮ್ಮ ಸಿಬ್ಬಂದಿಯೊಂದಿಗೆ ಎಂದಿನಂತೆ ಠಾಣೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ್ದಲ್ಲದೇ ಸಿಬ್ಬಂದಿಯೊಂದಿಗೆ ಬೆರೆತು ಆಚರಣೆಯಲ್ಲಿ ಪಾಲ್ಗೊಂಡರು. ಸಿಬ್ಬಂದಿ ಕೂಡ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಧರಿಸಿ ಎಲ್ಲಾ ಜಂಜಾಟಗಳನ್ನು ಮರೆತು, ಹೆಜ್ಜೆ ಹಾಕಿ ಸಂಭ್ರಮಿಸಿದರು.
ಇದನ್ನೂ ಓದಿ: ಹಣ್ಣು, ತರಕಾರಿ, ಹೂಗಳ ವಿಶೇಷ ಶೃಂಗಾರದಲ್ಲಿ ಬೆಂಗಳೂರಿನ ಶ್ರೀ ಸತ್ಯ ಗಣಪತಿ