ಹುಬ್ಬಳ್ಳಿ: ಕೊರೊನಾ ನಿಯಂತ್ರಣಕ್ಕೆ ಕೊರೊನಾ ವಾರಿಯರ್ಸ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯೂ ಹೊರತಾಗಿಲ್ಲ. ಹೀಗೆ ಹಗಲಿರುಳು ಕಾರ್ಯನಿರ್ವಹಿಸಿದ್ದ ವಾರಿಯರ್ಸ್ ಪೈಕಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ನವೀನ್ ಜಕ್ಕಲಿ ಇದೀಗ ಕೊರೊನಾ ಗೆದ್ದು ಬಂದಿದ್ದಾರೆ.
ಒಂದು ವಾರದ ಹಿಂದೆಯಷ್ಟೇ ಪಾಸಿಟಿವ್ ಬಂದ ಹಿನ್ನೆಲೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವಿರುದ್ಧ ಹೋರಾಡುವ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಇನ್ಸ್ಪೆಕ್ಟರ್ ನವೀನ್ ಜಕ್ಕಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇಡೀ ಠಾಣೆಯ ಸಿಬ್ಬಂದಿ ಬಳಗದಲ್ಲಿ ಸಂತಸವನ್ನುಂಟು ಮಾಡಿದೆ.
ಇನ್ಸ್ಪೆಕ್ಟರ್ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಗುಡಗೇರಿ ಠಾಣೆಯ ಪೊಲೀಸ್ ಸಿಬ್ಬಂದಿ ಅಭಿನಂದನೆ ಸಲ್ಲಿಸುವ ಮೂಲಕ ಠಾಣೆಗೆ ಬರಮಾಡಿಕೊಂಡರು.
ನವೀನ್ ಜಕ್ಕಲಿ ಕುಂದಗೋಳ ತಾಲೂಕಿನಾದ್ಯಂತ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಇವರಿರುವ ಠಾಣೆ ದೇಶದಲ್ಲೇ ಟಾಪ್ ಟೆನ್ ಪೊಲೀಸ್ ಠಾಣೆಗಳಲ್ಲಿ ಐದನೇ ಉತ್ತಮ ಪೊಲೀಸ್ ಠಾಣೆ ಎಂಬ ಪ್ರಶಂಸೆಯನ್ನು ಕೇಂದ್ರ ಸರ್ಕಾರದಿಂದ ಗಿಟ್ಟಿಸಿಕೊಂಡಿತ್ತು.
ಅಲ್ಲದೆ ತಾಲೂಕಿನ ಗುಡಗೇರಿ ವ್ಯಾಪ್ತಿಯಲ್ಲಿ ಬರುವ 21ಕ್ಕೂ ಅಧಿಕ ಗ್ರಾಮಗಳಲ್ಲಿ ಜಾಗೃತಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ನೀಡುವ ಮೂಲಕ ಜನಮನ್ನಣೆ ಪಡೆದಿರುವ ನವೀನ್ ಜಕ್ಕಲಿ ಕೊರೊನಾ ಗೆದ್ದು ಬಂದಿದ್ದು, ಠಾಣೆಯ ಸಿಬ್ಬಂದಿಯಷ್ಟೇ ಅಲ್ಲದೆ ತಾಲೂಕಿನ ಜನರಲ್ಲೂ ಸಂತಸ ಮೂಡಿಸಿದೆ.