ಹುಬ್ಬಳ್ಳಿ: ಮಂಟೂರಿನ ರಾಮ ದೇವಸ್ಥಾನದ ಬಳಿ ಇರುವ ನಲ್ಲಮ್ಮ ದೇವಿ ದೇವಸ್ಥಾನದಲ್ಲಿ ದೇವಿ ಕಣ್ಣು ಬಿಟ್ಟಿದ್ದಾಳೆ ಎಂಬ ಸುದ್ದಿ ಎಲ್ಲೆಡೆ ಹರಿದಾಡತೊಡಗಿತ್ತು. ಆದ್ರೆ ಅದರ ಹಿಂದಿನ ಅಸಲಿಯತ್ತು ಏನು ಅನ್ನೋದು ಈಗ ಬಟಾಬಯಲಾಗಿದೆ.
ರಾತ್ರೋರಾತ್ರಿ ದೇವತೆ ಕಣ್ಣು ಬಿಟ್ಟಿದ್ದಾಳೆ ಎಂದು ಸುದ್ದಿ ಕೇಳಿದ ಜನರು ಇದು ದೇವರ ಪವಾಡ ಎಂದು ನಂಬಿ ತಂಡೋಪತಂಡವಾಗಿ ಆಗಮಿಸಿ ದೇವಿ ದರ್ಶನ ಪಡೆದಿದ್ದರು. ಆದ್ರೆ ಈಗ ಇದರ ಅಸಲಿಯತ್ತನ್ನು ಭೇದಿಸಿರುವ ಪೊಲೀಸರೇ ಬೆಸ್ತುಬಿದ್ದಿದ್ದಾರೆ.
ದೇವಸ್ಥಾನ ರೈಲ್ವೆ ಇಲಾಖೆಯ ಜಾಗದಲ್ಲಿದೆ. ಹಾಗಾಗಿ ಇದನ್ನು ತೆರವುಗೊಳಿಸಲು ಇಲಾಖೆ ಮುಂದಾಗಿತ್ತು. ಇದನ್ನು ತಿಳಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಹೇಗಾದರು ದೇವಾಲಯ ಉಳಿಸಿಕೊಳ್ಳಬೇಕೆಂಬ ಕಾರಣದಿಂದ ಹೈಡ್ರಾಮಾ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.
ದೇವರಿಗೆ ಕಣ್ಣು ಬಂದಿವೆ. ಲಕ್ಷಾಂತರ ಜನರು ದೇವಿ ದರ್ಶನಪಡೆಯುತ್ತಾರೆ ಎಂದು ನಂಬಿಸಿ ದೇವಾಲಯ ತೆರವುಗೊಳಿಸುವುದನ್ನು ತಡೆಯಲು ಹುನ್ನಾರ ಮಾಡಿದ್ದರು ಎನ್ನಲಾಗ್ತಿದೆ. ನೋಡ ನೋಡುತ್ತಿದ್ದಂತೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಆರಂಭಿಸಿ, ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ಸರತಿ ಸಾಲಿನಲ್ಲಿ ಜನರಿಗೆ ದೇವಿ ದರ್ಶನ ಪಡೆಯಲು ಅವಕಾಶ ಕಲ್ಪಿಸಿದ್ದರು.
ರಾತ್ರೋರಾತ್ರಿ ನಲ್ಲಮ್ಮ ದೇವಿಗೆ ಪ್ಲಾಸ್ಟಿಕ್ ಕಣ್ಣು ಅಂಟಿಸಿ, ದೇವಿ ಕಣ್ಣು ಬಿಟ್ಟಿದ್ದಾಳೆ ಎಂದು ನಂಬಿಸಿದ್ದರು ಕೆಲ ಕಿಡಿಗೇಡಿಗಳು. ಆದ್ರೆ ಇದು ವದಂತಿಯಷ್ಟೇ, ಅನ್ನೋ ಸತ್ಯ ಈಗ ಬಹಿರಂಗವಾಗಿದೆ. ದೇವರಿಗೆ ಹಾಕಿದ್ದ ಬೆಳ್ಳಿ ಕಣ್ಣನ್ನು ಯಾರೋ ಕದ್ದರು ಎಂದು ನಂಬಿಸಿ, ಅದಕ್ಕೆ ಪ್ಲಾಸ್ಟಿಕ್ ಕಣ್ಣು ಅಳವಡಿಸಿರುವುದನ್ನು ಪೊಲೀಸರು ಮತ್ತು ರಾಮ ದೇವಸ್ಥಾನದ ಟ್ರಸ್ಟಿಗಳು ಬಯಲು ಮಾಡಿದ್ದಾರೆ.
ಹುಣಸೆ ಹಣ್ಣಿನ ಅಂಟಿನಿಂದ ದೇವಿಗೆ ಪ್ಲಾಸ್ಟಿಕ್ ಕಣ್ಣು ಅಂಟಿಸಿದ್ದರು ಎಂಬುದು ಬಹಿರಂಗಗೊಂಡಿದೆ. ಇವರ ಈ ಹೈಡ್ರಾಮಾ ಕಂಡು ಪೊಲೀಸರೇ ಬೆಸ್ತುಬಿದ್ದಿದ್ದಾರೆ.