ಹುಬ್ಬಳ್ಳಿ: ಎರಡನೇ ಮಹಾಯುದ್ಧದಲ್ಲಿ ಭಾರತವನ್ನು ಪ್ರತಿನಿಧಿಸಿ ಗೆಲುವಿಗೆ ಸಾಕ್ಷಿಯಾಗಿದ್ದ ಸೇನಾನಿಯ ಸೇವೆಯನ್ನು ಗುರುತಿಸಿ ಅಂದಿನ ಸರ್ಕಾರ ಅವರಿಗೆ ಜಾಗ ನೀಡಿತ್ತು. ಆದರೀಗ ಜಾಗವೂ ಇಲ್ಲದೆ ಪರಿಹಾರವೂ ಸಿಗದೆ ಸೇನಾನಿಯ ಕುಟುಂಬ ಕಂಗಾಲಾಗಿದೆ.
ಇಲ್ಲಿನ ಶಿರೂರು ಪಾರ್ಕ್ನ ನಿವಾಸಿಗಳಾದ ಪ್ರಭಾಕರ ಅಠಾವಳೆ ಎಂಬುವವರ ತಾತ ಪಾಂಡುರಂಗ ಅಠಾವಳೆ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಕ್ಕೂ ಮುನ್ನವೇ ಯೋಧ ಪ್ರಾಣವನ್ನು ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡಿದ್ದರು. ಇದರ ನಡುವೆ 1952 ರಲ್ಲಿ ಅವರು ನಿವೃತ್ತಿ ಹೊಂದಿದ ಬಳಿಕ ಅವರ ಸೇವೆ ಮೆಚ್ಚಿದ ಆಗಿನ ಬಾಂಬೆ ಸರ್ಕಾರ ಅವರಿಗೆ ಹುಬ್ಬಳ್ಳಿಯ ಈಗಿನ ತೊಳನಕೆರೆ (ಆಗಿನ ತೋಪಲಗಟ್ಟಿ)ಯಲ್ಲಿ ಒಟ್ಟು 15 ಎಕರೆ 38 ಗುಂಟೆ ಜಾಗವನ್ನು ನೀಡಿತ್ತು.
ಅದಾದ ಬಳಿಕ ಸುಮಾರು 10 ವರ್ಷಗಳ ಕಾಲ ಬೇಸಾಯ ಮಾಡಿಕೊಂಡು ಬಂದಿದ್ದರು. ಆದರೆ ಧಿಡೀರ್ನೇ ಬದಲಾಗಿ ಬಂದ ಅಧಿಕಾರಿಗಳು ಅಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಎಲ್ಲಾ ಜಾಗವನ್ನು ವಶಕ್ಕೆ ಪಡೆದುಕೊಂಡರು. ಆಸ್ಪತ್ರೆ ಮಾಡುತ್ತೇವೆ. ಅಲ್ಲಿ ಎಲ್ಲರಿಗೂ ಚಿಕಿತ್ಸೆಗೆ ಅವಕಾಶ ಎಂದೇಳಿ ಹುಬ್ಬಳ್ಳಿ ಕೋ -ಆಪರೇಟಿವ್ ಬ್ಯಾಂಕ್ನವರು ಹೇಳಿದ್ದರು. ಆದರೆ, ಸೈನಿಕನಿಂದ ಜಾಗ ಪಡೆದ ನಂತರ ಯಾವುದೇ ಪರಿಹಾರ ನೀಡೋದಾಗಲಿ, ಅವರಿಗೆ ಬೇರೆ ಜಾಗ ನಿಗದಿ ಮಾಡೋದಾಗಲಿ ಮಾಡಿಲ್ಲ ಎಂದು ಯೋಧನ ಕುಟುಂಬ ಆರೋಪಿಸಿದೆ.
ಇನ್ನು ಜಾಗವನ್ನು ಕಳೆದುಕೊಂಡು ಕಂಗೆಟ್ಟ ಸೈನಿಕನ ಕುಟುಂಬ ಅಲ್ಲಿಂದ ಇಲ್ಲಿಯವರೆಗೆ ಒಟ್ಟು 10 ಸಾವಿರಕ್ಕೂ ಅಧಿಕ ಪತ್ರಗಳನ್ನು ಕೇಂದ್ರ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಬರೆದಿದೆ. ಆದರೆ, ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸದ್ಯ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮುತುವರ್ಜಿವಹಿಸಿ ಈ ಸಂಬಂಧ ಹುಬ್ಬಳ್ಳಿ ತಹಶೀಲ್ದಾರ್ಗೆ ಪತ್ರ ಬರೆದಿದ್ದು, ಸೈನಿಕನ ಕುಟುಂಬಕ್ಕೆ ಆದ ಅನ್ಯಾಯ ಸರಿಪಡಿಸಲು ಮುಂದಾಗಿದ್ದಾರೆ.
ಇತ್ತ ಯೋಧನ ಕುಟುಂಬದಿಂದ ಪಡೆದ ಜಾಗದಲ್ಲಿ ಯಾವುದೇ ಆಸ್ಪತ್ರೆ ನಿರ್ಮಾಣವಾಗಿಲ್ಲ. ಅದೊಂದು ಕೊಳಗೇರಿ ನಿರ್ಮೂಲನಾ ಪ್ರದೇಶವಾಗಿದ್ದು, ಈಗಾಗಲೇ ಅಲ್ಲಿದ್ದ ಮನೆಗಳಿಗೆ ಅಕ್ರಮ ಸಕ್ರಮ ಅಂತಲೂ ಜಾಗ ನೀಡಲಾಗಿದೆ.