ಹುಬ್ಬಳ್ಳಿ : ಇಂದಿರಾ ಕ್ಯಾಂಟಿನ್ ಕಾಂಗ್ರೆಸ್ ಸರ್ಕಾರದ ಪ್ರತಿಷ್ಠೆಯ ಯೋಜನೆ. ಆದರೆ ಈ ಯೋಜನೆಗೆ ಈ ಹಿಂದಿನ ಬಿಜೆಪಿ ಸರ್ಕಾರ ಎಳ್ಳು ನೀರು ಬಿಟ್ಟಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಬಡವರ ಸ್ಟಾರ್ ಹೋಟೆಲ್ ಇಂದಿರಾ ಕ್ಯಾಂಟೀನ್ಗೆ ಮರುಜೀವ ಬಂದಿದೆ.
ಇಂದಿರಾ ಕ್ಯಾಂಟಿನ್‌ಗೆ ಪುನರುಜ್ಜೀವನ ನೀಡಲು ಕಸರತ್ತು ನಡೆಸಿದೆ. ಆದರೆ, ಮಹಾನಗರದಲ್ಲಿ ಆರಂಭವಾಗಬೇಕಾದ ಇನ್ನೂ ಮೂರು ಕ್ಯಾಂಟಿನ್ಗಳು ಜೀವ ಪಡೆದುಕೊಂಡಿಲ್ಲ. ಇವುಗಳ ಆರಂಭಕ್ಕೆ ಕಾಳಜಿ ತೋರಬೇಕಾದ ಪಾಲಿಕೆ ಕಳೆದ ಐದು ವರ್ಷಗಳಿಂದ ಯಾಕೋ ಮನಸ್ಸು ಮಾಡಲಿಲ್ಲ. ಬಡವರು ,ನಿರ್ಗತಿಕರು, ಕಾರ್ಮಿಕರು ಅತ್ಯಂತ ಕಡಿಮೆ ದರದಲ್ಲಿ ಮೂರು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಅಂದಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್ ಯೋಜನೆ ಅನುಷ್ಠಾನಕ್ಕೆ ತಂದಿತ್ತು. ಅಗತ್ಯ ಸ್ಥಳ ಗುರುತಿಸಿ ಕ್ಯಾಂಟೀನ್ ಕೂಡ ಆರಂಭಿಸಲಾಯಿತು. ಆದರೆ, ನಂತರ ಬಂದ ಸರ್ಕಾರ ಅಷ್ಟೊಂದು ಕಾಳಜಿ ತೋರಲಿಲ್ಲ.
ಮೂಲ ಯೋಜನೆ ಪ್ರಕಾರ, ಮಹಾನಗರದಲ್ಲಿ 12 ಕ್ಯಾಂಟಿನ್ ಮಂಜೂರಾಗಿದ್ದವು. ಹೆಚ್ಚು ಬಡವರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಸ್ಥಳ ಗುರುತಿಸುವುದು ಪಾಲಿಕೆ ಜವಾಬ್ದಾರಿಯಾಗಿತ್ತು. ಗುತ್ತಿಗೆದಾರರಿಂದ 12 ಕ್ಯಾಂಟಿನ್‌ಗಳಿಗೆ ಗ್ಯಾರಂಟಿ ಹಣ ಪಡೆಯಲಾಗಿದೆ. ಆದರೆ, 12 ರಲ್ಲಿ ಸಾಕಾರಗೊಂಡಿದ್ದು 9 ಮಾತ್ರ. ಇನ್ನೂ ಮೂರು ಕ್ಯಾಂಟಿನ್‌ಗಳ ಆರಂಭಕ್ಕೆ ಐದು ವರ್ಷವೇ ಕಳೆದು ಹೋಗಿದೆ.
ಹುಬ್ಬಳ್ಳಿಯಲ್ಲಿ ಸ್ಥಳ ಗುರುತಿಸಿಲ್ಲ: ಧಾರವಾಡದ ಕಲಾಭವನದ ಬಳಿ ಒಂದು ಕ್ಯಾಂಟಿನ್‌ಗೆ ಸುತ್ತಲಿನ ಕೆಲ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸಿ ರಾಜಕೀಯ ಒತ್ತಡ ಹೇರಿ ಆರಂಭವಾಗದಂತೆ ನೋಡಿಕೊಂಡರು. ಇನ್ನು ಸಪ್ತಾಪುರದಲ್ಲೂ ಕೂಡ ಇದೇ ಕೆಲಸ ಆಯಿತು. ಇನ್ನು ಹುಬ್ಬಳ್ಳಿಯಲ್ಲಿ ಸ್ಥಳ ಗುರುತಿಸಿಲ್ಲ. ಇಲ್ಲಿನ ರಾಜಕೀಯ ಇಚ್ಚಾಶಕ್ತಿ ಕೊರತೆ ಇದಕ್ಕೆಲ್ಲ ಕಾರಣವಾಯಿತು. ಇದರಿಂದ ಈ ಭಾಗದ ಜನರು ಯೋಜನೆಯಿಂದ ವಂಚಿತರಾದರು ಎಂಬ ಆರೋಪ ಇದೆ.
ಕಾರ್ಮಿಕ ಇಲಾಖೆಯಿಂದ 9 ಕ್ಯಾಂಟಿನ್‌ಗಳಿಗೆ ಗುತ್ತಿಗೆದಾರರಿಗೆ ಬರಬೇಕಾದ ಬರೋಬ್ಬರಿ 3 ಕೋಟಿ ರೂ ಸ್ಥಗಿತಗೊಂಡಿದೆ. ಶೇ. 50 ಹೊಣೆಗಾರಿಕೆ ಹೊಂದಿದ್ದ ಪಾಲಿಕೆ ಕೂಡ ಬಿಲ್ ಪಾವತಿಗೆ ಸಮಯ ತೆಗೆದುಕೊಳ್ಳುತ್ತಿತ್ತು. ಈ ಪಾಲಿಕೆ ಆಯುಕ್ತರು ಆಗಾಗ ಬಿಲ್ ಪಾವತಿಸುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಿದೆ.
ಹಳೇ ಗುತ್ತಿಗೆದಾರರೆ ಗತಿ : ಮಹಾನಗರದ ಕ್ಯಾಂಟಿನ್ ನಿರ್ವಹಣೆ ಗುತ್ತಿಗೆ ಪಡೆದು ಆರೇಳು ತಿಂಗಳಾದರೂ ಗುತ್ತಿಗೆದಾರ ಕಾರ್ಯಾರಂಭ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದಿನ ಗುತ್ತಿಗೆದಾರನ ಠೇವಣಿ ಹಣ ವಾಪಸ್ ನೀಡಲಾಗಿದೆ. ಆದರೆ, ಹಿಂದಿನಿಂದ ಮಾಡಿಕೊಂಡು ಬಂದ ಹಿನ್ನೆಲೆಯಲ್ಲಿ ಇವರೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಬಹುತೇಕ ಕಡೆಗಳಲ್ಲಿ ಆರಂಭದ ಕಳೆಯನ್ನು ಕಳೆದುಕೊಂಡಿವೆ.
ಕಳೆದ ಐದು ವರ್ಷಗಳ ಹಿಂದೆ ಆರಂಭವಾಗಿರುವ ಕ್ಯಾಂಟಿನ್‌ಗಳ ನಿರ್ವಹಣೆಗೂ ಆದ್ಯತೆ ನೀಡಬೇಕಿದೆ. ಕ್ಯಾಂಟಿನ್ ಫಿಲ್ಟರ್ ,ಪಾತ್ರೆ ಸೇರಿದಂತೆ ಇತರ ನಿರ್ವಹಣೆ ಸದ್ಯಕ್ಕೆ ಗುತ್ತಿಗೆದಾರರೇ ನಿರ್ವಹಿಸುತ್ತಿದ್ದಾರೆ. ಇದು ಕೂಡ ಹಿಂದಿನ ದರವಾಗಿದ್ದು, ಇದು ಕೂಡ ಪರಿಷ್ಕರಣೆಯಾಗಬೇಕಿದೆ. ಈ ಎಲ್ಲಾ ಅಂಶಗಳ ಬಗ್ಗೆ ಸರ್ಕಾರ ಗಮನ ಹರಿಸಿದರೆ, ಇಂದಿನ ಬೇಡಿಕೆ ಹಾಗೂ ಹಿಂದಿನ ಕಳೆ ಮರುಕಳಿಸಲಿದೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಉಚಿತ ಆಹಾರಕ್ಕೆ ಭಾವುಕರಾದ ಹಿರಿಜೀವ... ಸರ್ಕಾರದ ಕ್ರಮಕ್ಕೆ ಮೆಚ್ಚುಗೆ