ಹುಬ್ಬಳ್ಳಿ: ಇಲ್ಲಿಯ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ಸೆ.8 ರಿಂದ 11 ರವರಗೆ ನಡೆಯಲಿರುವ ಭಾರತ ಎ ಹಾಗೂ ನ್ಯೂಜಿಲ್ಯಾಂಡ್ ಎ ತಂಡಗಳ ನಡುವಿನ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ವೀಕ್ಷಿಸಲು 2 ಸಾವಿರ ಜನರಿಗೆ ಉಚಿತ ಪ್ರವೇಶ ನೀಡಲಾಗಿದೆ ಎಂದು ಕೆಎಸ್ಸಿಎ ಧಾರವಾಡ ಕನ್ವೇನರ್ ಅವಿನಾಶ್ ಪೋತೆದಾರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನೋಂದಾಯಿತ ಅಕಾಡೆಮಿಯ ಕ್ರಿಕೆಟ್ ಕಲಿಕಾ ಆಟಗಾರರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಸಾರ್ವಜನಿಕರ ವೀಕ್ಷಣೆಗೂ ಅನುಮತಿ ನೀಡಲಾಗಿದೆ ಎಂದರು. ಕಳೆದ ಮೂರು ವರ್ಷದಿಂದ ಈ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ಇದೀಗ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅವಕಾಶ ನೀಡಿದ್ದು, ನಗರದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದು ಸಾರ್ವಜನಿಕರಿಗೆ ಸಂತಸ ಮೂಡಿಸಿದೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳಿಗೆ ಅವಕಾಶ ನೀಡಬೇಕು ಎಂದು ಬಿಸಿಸಿಐಗೆ ಮನವಿ ಮಾಡಲಾಗಿದ್ದು, ಪ್ರಸಕ್ತ ವರ್ಷ ಮೈದಾನದಲ್ಲಿ ಮೂರು - ನಾಲ್ಕು ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಐಪಿಎಲ್ ಪಂದ್ಯಗಳಿಗೂ ಅವಕಾಶ ಸಿಗುವ ಸಾಧ್ಯತೆ ಇದೆ ಎಂದರು. ಈ ಸಂದರ್ಭ ವೀರಣ್ಣ ಸವಡಿ, ಅಲ್ತಾಪ್ ಕಿತ್ತೂರ, ಜೋನಲ್ ಕಮಿಟಿ ಸದಸ್ಯ ಶಿವಾನಂದ ಗುಂಜಾಳ ಇದ್ದರು.
ಇದನ್ನೂ ಓದಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ 'ಮಿಸ್ಟರ್ ಐಪಿಎಲ್' ಸುರೇಶ್ ರೈನಾ