ಧಾರವಾಡ: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎನ್ನಲಾದ ವಾಹನಗಳನ್ನು ತಡೆ ಹಿಡಿದ ಘಟನೆ ಧಾರವಾಡ ತಾಲೂಕಿನ ನಿಗದಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಧಾರವಾಡದಿಂದ ಹಳಿಯಾಳದ ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ 3 ವಾಹನಗಳನ್ನು ಗ್ರಾಮಸ್ಥರು ಹಾಗೂ ಯುವಕರ ಸಹಾಯದಿಂದ ತಡೆಯಲಾಗಿದೆ. ಒಂದು ವಾಹನ ಮನಸೂರ ಕ್ರಾಸ್ ಬಳಿ, ಮತ್ತೆರಡು ವಾಹನಗಳನ್ನು ನಿಗದಿ ಗ್ರಾಮದ ಬಳಿ ತಡೆದಿದ್ದಾರೆ ಎನ್ನಲಾಗಿದೆ.
ಇವುಗಳಲ್ಲಿ 10ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ವಾಹನ ತಡೆದು ಜಾನುವಾರುಗಳನ್ನು ಗ್ರಾಮಸ್ಥರು ಕೆಳಗಿಳಿಸಿದ್ದಾರೆ. ಒಂದು ವಾಹನವನ್ನು ಧಾರವಾಡ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನೆರಡು ವಾಹನಗಳನ್ನು ನಿಗದಿ ಗ್ರಾಮ ಪಂಚಾಯತ್ನಲ್ಲಿ ನಿಲ್ಲಿಸಲಾಗಿದೆ. ಧಾರವಾಡ ಗ್ರಾಮಿಣ ಮತ್ತು ಅಳ್ನಾವರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.