ಹುಬ್ಬಳ್ಳಿ: ಕೌಟುಂಬಿಕ ಕಲಹ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯ ಸಂತೋಷ ನಗರದ ನಿವಾಸಿ ರೋಹಿತ್ ಗೌಡ ಪಾಟೀಲ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು ಪತ್ನಿ ಜೊತೆ ಜಗಳವಾಡಿದ್ದರು. ಮುಂಜಾನೆ ಎಂದಿನಂತೆ ಹೋಟೆಲ್ಗೆ ತೆರಳುತ್ತಿದ್ದ ವೇಳೆ ಪತ್ನಿಯ ಬಳಿ ಬೈಕ್ ಕೀ ಕೊಡುವಂತೆ ವಾಗ್ವಾದ ನಡೆಸಿದ್ದಾರೆ. ಪತ್ನಿ ಬೈಕ್ ಕೀ ನೀಡದ ಪರಿಣಾಮ ಅಸಮಾಧಾನಗೊಂಡ ರೋಹಿತ್ ತನ್ನ ಹೋಟೆಲ್ ಹಿಂಭಾಗದ ಸಂತೋಷ ನಗರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಓದಿ: ಆನೆ ದಂತದಲ್ಲಿ ಕಲಾಕೃತಿ ಕೆತ್ತನೆ, ಮಾರಾಟಕ್ಕೆ ಯತ್ನಿಸಿದ ಆರೋಪಿಗಳು ಅಂದರ್
ರೋಹಿತ್ ಗೌಡ ಕೆರೆಗೆ ಜಿಗಿದ ದೃಶ್ಯ ನೋಡಿದ ಸ್ಥಳೀಯರಿಬ್ಬರು ರಕ್ಷಣೆಗೆ ಮುಂದಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ತದನಂತರ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನೊಂದಿಗೆ ಮೃತದೇಹವನ್ನು ಹೊರತಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.