ಹುಬ್ಬಳ್ಳಿ: ಸರ್ಕಾರದ ಹುದ್ದೆಯಲ್ಲಿದ್ದವರ ಐಡಿ ಕಾರ್ಡ್ ತೆಗೆದುಕೊಂಡು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವ ಪ್ರಕರಣಗಳು ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹೆಂಡತಿ ಐಡಿ ಕಾರ್ಡ್ ದುರುಪಯೋಗ ಪಡಿಸಿಕೊಂಡು ಅಲೆದಾಡುತ್ತಿದ್ದ ಪತಿಗೆ ಅವಳಿ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಮೈ ಚಳಿ ಬಿಡಿಸಿದ್ದಾರೆ. ವಾಣಿ ಜ್ಯನಗರಿಯಲ್ಲಿ ಕೊರೊನಾ ಕರ್ಫ್ಯೂ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಅವರು ಫೀಲ್ಡ್ಗೆ ಇಳಿದಿದ್ದು, ಹೆಂಡತಿಯ ಕಚೇರಿ ಐಡಿ ಕಾರ್ಡನ್ನು ಬಳಕೆ ಮಾಡಿಕೊಂಡು ಅಲೆದಾಡುತ್ತಿದ್ದ ಪತಿ ಮಹಾಶಯನ ಮೇಲೆ ಕೇಸ್ ಹಾಕಿದ್ದಾರೆ.
ಹೆಂಡಿತಿಯ ಐಡಿ ತೋರಿಸಿ ಪೊಲೀಸರಿಂದ ತಪ್ಪಿಸಿಕೊಂಡು ಅಲೆದಾಡುತ್ತಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಿದ ವೇಳೆ ಪತ್ನಿ ಕೆಲಸ ಮಾಡುವ ಕಚೇರಿಯ ಐಡಿ ಕಾರ್ಡ್ ಲಭಿಸಿದೆ. ಇದನ್ನು ಗಮನಿಸಿದ ಪೊಲೀಸ್ ಆಯುಕ್ತ ಲಾಬೂರಾಮ್, ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳಿಕ ಮಾತನಾಡಿದ ಅವರು, ಈಗಾಗಲೇ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಚ್ಚರಿಕೆ ನೀಡಲಾಗುತ್ತದೆ. ಯಾವುದೇ ರೀತಿಯಲ್ಲಿ ಐಡಿ ಕಾರ್ಡ್ ದುರುಪಯೋಗ ಮಾಡಿಕೊಳ್ಳಬೇಡಿ. ಅವಳಿ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡಲು ಬಿಡುವುದಿಲ್ಲ. ಸಾರ್ವಜನಿಕರು ಕೂಡ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.