ಧಾರವಾಡ: ಲಾಕ್ಡೌನ್ ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯದೊಂದಿಗೆ ಮಾನವೀಯತೆ ಕೂಡ ಮೆರೆದಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಮಹೇಂದ್ರ ನಾಯಕ್ ಸುಮಾರು 2.50 ಲಕ್ಷ ಮೌಲ್ಯದ ದಿನಸಿಯನ್ನು ಸ್ವಂತ ಹಣದಲ್ಲಿ ಖರೀದಿಸಿ, ಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಹಂಚಿದ್ದಾರೆ.
![ಸ್ವಂತ ಹಣದಲ್ಲಿ ದಿನಸಿ ವಿತರಿಸಿದ ಪಿಎಸ್‍ಐ](https://etvbharatimages.akamaized.net/etvbharat/prod-images/kn-dwd-2-working-psi-help-av-ka10001_23042020105125_2304f_1587619285_369.jpg)
ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದ ನಿವಾಸಿಯಾಗಿದ್ದಾರೆ. ತಮ್ಮ ಠಾಣೆಯ ಸುಮಾರು 35 ಕ್ಕೂ ಹೆಚ್ಚು ಸಿಬ್ಬಂದಿ, ಬೀಟ್ ಪೊಲೀಸರ ಸಹಾಯದಿಂದ ಆಯಾ ಗ್ರಾಮಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರು, ಇಟ್ಟಂಗಿ ಭಟ್ಟಿ ಕಾರ್ಮಿಕರು, ಕೂಲಿ ಕಾರ್ಮಿಕರು, ಮಕ್ಕಳಿಲ್ಲದ ವಯೋವೃದ್ದರು ಮತ್ತು ಪಡಿತರ ಚೀಟಿ ಹೊಂದಿರದೆ ಯಾವುದೇ ಸೌಲಭ್ಯ ಪಡೆಯದೆ ಇರುವ ಕುಟುಂಬಗಳನ್ನು ಗುರುತಿಸಿ, ತಮ್ಮ ಸಿಬ್ಬಂದಿಗಳ ಸಹಾಯದಿಂದ ತಮ್ಮದೆ ವಾಹನದಲ್ಲಿ ನೇರವಾಗಿ ಅಸಹಾಯಕರ ಮನೆಗೆ ತಲುಪಿಸಿದ್ದಾರೆ.
![ಸ್ವಂತ ಹಣದಲ್ಲಿ ದಿನಸಿ ವಿತರಿಸಿದ ಪಿಎಸ್‍ಐ](https://etvbharatimages.akamaized.net/etvbharat/prod-images/kn-dwd-2-working-psi-help-av-ka10001_23042020105125_2304f_1587619285_582.jpg)
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಅವರು ಪಿಎಸ್‍ಐ ಮಹೇಂದ್ರ ನಾಯಕ್ ಅವರ ಕಾರ್ಯ ಮೆಚ್ಚಿ, ಅಮ್ಮಿನಭಾವಿ ಗ್ರಾಮದಲ್ಲಿ ದಿನಸಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅವರ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ಸಹಾಯ, ಸಹಕಾರದಿಂದ ಧಾರವಾಡ ಗ್ರಾಮೀಣ ವ್ಯಾಪ್ತಿಯ ಮಾವಿನಕೊಪ್ಪ, ಹುಣಸಿಕುಮರಿ, ಲಾಳಗಟ್ಟಿ, ವಡವನಾಗಲಾವಿ, ಇಟಿಗಟ್ಟಿ, ಶಿವಳ್ಳಿ, ಹಳ್ಳಿಗೇರಿ, ಯರಿಕೊಪ್ಪ, ನರೇಂದ್ರ, ಕ್ಯಾರಕೊಪ್ಪ, ನಿಗದಿ ಮತ್ತು ಅಮ್ಮಿನಭಾವಿ ಸೇರಿದಂತೆ ಸುಮಾರು 20 ಹಳ್ಳಿಯ ಅತೀ ಬಡವ ಮತ್ತು ಅಸಹಾಯಕ 300 ಕುಟುಂಬಗಳಿಗೆ ರವೆ, ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳು ಸೇರಿದಂತೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ.